ಕರ್ನಾಟಕ

karnataka

ETV Bharat / state

ವೈದ್ಯಕೀಯ ಪ್ರಯೋಗಾಲಯ ನವೀಕರಣ ಅರ್ಜಿ: ವಿಲೇವಾರಿಗೆ ತಿಂಗಳ ಗಡುವು ವಿಧಿಸಿದ ಹೈಕೋರ್ಟ್

ನವೀಕರಣಕ್ಕೆ ಅರ್ಜಿ ಸಲ್ಲಿಸಿ ಒಂದು ತಿಂಗಳ ಬಳಕವೂ ವಿಲೇವಾರಿ ಮಾಡದೇ ಇದ್ದಲ್ಲಿ ಪ್ರಯೋಗಾಲಯದ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ಇರಲ್ಲ ಎಂದು ಪೀಠ ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : 5 hours ago

ಬೆಂಗಳೂರು: ವೈದ್ಯಕೀಯ ಪ್ರಯೋಗಾಲಯಗಳನ್ನು ನವೀಕರಿಸುವ ಸಂಬಂಧ ಸಲ್ಲಿಕೆಯಾಗುವ ಮನವಿಗಳನ್ನು ವಿಲೇವಾರಿ ಮಾಡುವುದಕ್ಕೆ ಹೈಕೋರ್ಟ್ ಒಂದು ತಿಂಗಳ ಗಡುವು ವಿಧಿಸಿದೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆಯಡಿ ವೈದ್ಯಕೀಯ ಪ್ರಯೋಗಾಲಯ ನವೀಕರಣಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿ ವಿಲೇವಾರಿ ಮಾಡದೇ ಅಕ್ರಮವಾಗಿ ಪ್ರಯೋಗಾಲಯ ನಡೆಸಲಾಗಿದೆ ಎಂದು ಆರೋಪಿಸಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಬಿ.ಗೋಪಾಲಕೃಷ್ಣ ಎಂಬುವರ ಮತ್ತಿತರರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಗಡುವು ವಿಧಿಸಿ ಆದೇಶಿಸಿದೆ. ಅಲ್ಲದೇ, ಅರ್ಜಿದಾರರ ಸಂಸ್ಥೆ ವಿರುದ್ಧ ಪ್ರಸವ ಪೂರ್ವ ರೋಗ ನಿರ್ಣಯ ತಂತ್ರಗಳು(ಲಿಂಗ ಆಯ್ಕೆ ನಿಷೇಧ) ಕಾಯಿದೆಯಡಿ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ಪ್ರಯೋಗಾಲಯ ನವೀಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ಸಂಬಂಧಪಟ್ಟ ಪ್ರಾಧಿಕಾರ ನಿಗದಿತ ಸಮಯದಲ್ಲಿ ವಿಲೇವಾರಿ ಮಾಡುವುದು ಅತ್ಯವಶ್ಯಕವಾಗಿರಲಿದೆ. ಈ ಸಮಯವು ಒಂದು ತಿಂಗಳ ಅವಧಿಯಾಗಿರಬೇಕು. ಸೂಕ್ತ ಸಮುಯಕ್ಕೆ ಪ್ರಯೋಗಾಲಯ ಎಲ್ಲ ದಾಖಲೆಗಳೊಂದಿಗೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದು, ಒಂದು ತಿಂಗಳ ಬಳಿಕವೂ ಆ ಅರ್ಜಿ ವಿಲೇವಾರಿ ಮಾಡದಿದ್ದರೆ ಅಂತಹ ಪ್ರಯೋಗಾಲಯ ಕಾರ್ಯನಿರ್ವಹಿಸಿದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಅವಕಾಶವಿರುವುದಿಲ್ಲ ಎಂದು ಪೀಠ ಹೇಳಿದೆ.

ಅರ್ಜಿಯನ್ನು ಸ್ವೀಕರಿಸುವ ಸಂಬಂಧಪಟ್ಟ ಅಧಿಕಾರಿಗಳು ವಿಲೇವಾರಿ ಮಾಡದಿದ್ದಲ್ಲಿ ಅಂತಹ ಅಧಿಕಾರಿ ವಿರುದ್ಧ ಕರ್ತವ್ಯ ಲೋಪದ ಆರೋಪದಲ್ಲಿ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ಎಚ್ಚರಿಸಿದೆ.

ಪ್ರಕರಣದಲ್ಲಿ ಪ್ರಯೋಗಾಲಯದ ಪರವಾನಗಿ ಅವಧಿ ಮುಗಿಯುವ ಮುನ್ನವೇ ಅಗತ್ಯ ಶುಲ್ಕದೊಂದಿಗೆ ನವೀಕರಣಕ್ಕಾಗಿ ಅರ್ಜಿದಾರರ ಮನವಿ ಮಾಡಿದ್ದಾರೆ. ಆದರೆ, ಎರಡು ವರ್ಷ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯತನದಿಂದ ವರ್ತಿಸಿದ್ದಾರೆ. ಈ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಕರ್ತವ್ಯ ಲೋಪದಿಂದ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸುವಂತಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ, ಅರ್ಜಿದಾರರ ಸಂಸ್ಥೆಯ ವಿರುದ್ಧ ಭ್ರೂಣ ಲಿಂಗ ಪತ್ತೆ ಕಾರ್ಯ ನಡೆಯುತ್ತಿದೆ ಎಂಬುದಾಗಿ ಆರೋಪಿಸಲಾಗಿದೆ. ಆದರೆ, ಅದಕ್ಕೆ ಸಂಬಂಧಪಟ್ಟ ಯಾವುದೇ ದಾಖಲೆಗಳನ್ನು ಸಲ್ಲಿಸಲಾಗಿಲ್ಲ. ಜೊತೆಗೆ, ಅರ್ಜಿದಾರರ ವಿರುದ್ಧ ಪ್ರಾಸಿಕ್ಯೂಷನ್ ಪ್ರಾರಂಭಿಸುವುದಕ್ಕೂ ಮುನ್ನ ಶೋಕಾಸ್ ನೋಟಿಸ್ ನೀಡಿ ಪ್ರತಿಕ್ರಿಯೆ ಕೇಳಿಲ್ಲ. ಆದ್ದರಿಂದ ದಾಖಲೆಗಳಿಲ್ಲದೇ ಕ್ಲಿನಿಕ್ ನಡೆಸಲಾಗುತ್ತಿದೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಿಸಲಾಗದು ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ:ಅರ್ಜಿದಾರ ಗೋಪಾಲ ಕೃಷ್ಣ ಅವರು 2017ರಿಂದ 2022ರವರೆಗೂ ವೈದ್ಯಕೀಯ ಪ್ರಯೋಗಾಲಯ ನಡೆಸುತ್ತಿದ್ದರು. 2022ರ ಸೆಪ್ಟಂಬರ್ 26ರಂದು ಅವಧಿ ಮುಗಿದ ಹಿನ್ನೆಲೆಯಲ್ಲಿ ಪ್ರಯೋಗಾಲಯದ ನೋಂದಣಿ ನವೀಕರಣಕ್ಕಾಗಿ ನಿಗದಿತ ಶುಲ್ಕವನ್ನು ಪಾವತಿಸಿ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಎರಡು ವರ್ಷ ಆದರೂ ಈ ಸಂಬಂಧ ಸಕ್ಷಮ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

2024ರ ಫೆಬ್ರವರಿ 22ರಂದು ದಾಳಿ ನಡೆಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ, ಕ್ಲಿನಿಕ್‌ನಲ್ಲಿ ತಪಾಸಣೆ ಮತ್ತು ಶೋಧ ನಡೆಸಿ ಅಲ್ಟ್ರಾಸೌಂಡ್ ಯಂತ್ರವನ್ನು ವಶಪಡಿಸಿಕೊಂಡಿದ್ದರು. ಅಲ್ಲದೇ, ಮತ್ತೊಂದು ಬಾರಿ ದಾಳಿ ನಡೆಸಿದ್ದ ಅಧಿಕಾರಿಗಳು ಗೋಪಾಲ ಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಸರ್ಕಾರದ ಮಹತ್ವದ ಹೆಜ್ಜೆ: 'ಗೃಹ ಆರೋಗ್ಯ' ಯೋಜನೆಗೆ ಗುರುವಾರ ಚಾಲನೆ

ABOUT THE AUTHOR

...view details