ಮಂಗಳೂರು: ಬುಧವಾರ ನಸುಕಿನ ಜಾವ 4 ಗಂಟೆಯ ಹೊತ್ತಿಗೆ ಭೀಕರ ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಮಹಿಳಾ ಕಾನ್ಸ್ಟೇಬಲ್ವೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ನಗರದ ಕೆಪಿಟಿಯಲ್ಲಿ ಈ ಘಟನೆ ನಡೆದಿದೆ.
ಕದ್ರಿ ಪೊಲೀಸ್ ಠಾಣೆಯ ಮುರ್ಶಿದಾ ಬಾನು ಸಮಯಪ್ರಜ್ಞೆ ಮೆರೆದ ಕಾನ್ಸ್ಟೇಬಲ್ ಆಗಿದ್ದಾರೆ. ಇವರು ಬುಧವಾರ ನಸುಕಿನ ಜಾವ 4ಗಂಟೆ ವೇಳೆಗೆ ಕರ್ತವ್ಯಕ್ಕೆ ತೆರಳುತ್ತಿದ್ದರು. ಕೆಪಿಟಿ ಬಳಿಯ ವ್ಯಾಸನಗರದ ತಿರುವಿನಲ್ಲಿ ರಸ್ತೆ ಬದಿ ನಿಂತಿದ್ದ ಟ್ರಕ್ವೊಂದಕ್ಕೆ ಕೋಳಿ ಸಾಗಾಟದ ಪಿಕಪ್ ವಾಹನ ಡಿಕ್ಕಿಯಾಗಿತ್ತು. ಅಪಘಾತದ ತೀವ್ರತೆಗೆ ಪಿಕಪ್ ಮುಂಭಾಗ ನಜ್ಜುಗುಜ್ಜಾಗಿದ್ದು, ವಾಹನದ ಕ್ಲೀನರ್ ತೀವ್ರವಾಗಿ ಗಾಯಗೊಂಡಿದ್ದರು. ಕೈ, ಕಾಲು ಮತ್ತು ಮುಖಕ್ಕೆ ಜಜ್ಜಿದ ಗಾಯವಾಗಿದ್ದರಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅಪಘಾತದಲ್ಲಿ ಚಾಲಕನಿಗೂ ಗಾಯಗಳಾದ ಹಿನ್ನೆಲೆ ಅವರು ಕೂಡ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದು, ಚೀರಾಡುತ್ತಿದ್ದರು.
ದಿನಾಂಕ23.10.24ರಂದುಬೆಳಗಿನ ಜಾವ 3.40ಗಂಟೆಗೆ KPTಬಳಿಪಿಕಪ್ &ಕಂಟೇನರ್ ಮಧ್ಯೆಅಪಘಾತಸಂಭವಿಸಿದ್ದು, ತೀವ್ರವಾಗಿಗಾಯಗೊಂಡುರಕ್ತದಮಡುವಿನಲ್ಲಿ ಬಿದ್ದಿದ್ದ ಕ್ಲೀನರ್ ಇವರನ್ನುಕದ್ರಿಪೊಲೀಸ್ ಠಾಣೆಯಮಹಿಳಾಸಿಬ್ಬಂದಿ ಮನ್ ಶಿದಬಾನು ರವರುಕೂಡಲೇತಮ್ಮಸ್ಕೂಟಿಯಲ್ಲಿಎಜೆ ಆಸ್ಪತ್ರೆಗೆಚಿಕಿತ್ಸೆಬಗ್ಗೆದಾಖಲುಮಾಡಿ ಕರ್ತವ್ಯ ಸಮಯಪ್ರಜ್ಞೆಮೆರೆದಿರುತ್ತಾರೆ pic.twitter.com/VRkrvqGFpH
— Mangaluru East PS (@mangalurueastps) October 23, 2024
ಚೀರಾಟ, ನರಾಳ ಕಂಡು ಆಸ್ಪತ್ರೆಗೆ ದಾಖಲಿಸಿದ ಕಾನ್ಸ್ಟೇಬಲ್: ಆಗ ಕಾನ್ಸ್ಟೇಬಲ್ ಮುರ್ಶಿದಾ ಬಾನು, ಸ್ಥಳಕ್ಕೆ ತೆರಳಿ ಕ್ಲೀನರ್ನನ್ನು ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕ ನಿಲ್ಲುವ ಸ್ಥಿತಿಯಲ್ಲಿ ಇಲ್ಲದಿದ್ದರೂ, ಆಟೋ ಸಿಗದ ಕಾರಣ ತನ್ನ ಸ್ಕೂಟರ್‌ನಲ್ಲೇ ಒಂದು ಕೈಯಲ್ಲಿ ಆತನನ್ನು ಹಿಡಿದುಕೊಂಡು ಆಸ್ಪತ್ರೆಗೆ ತಲುಪಿಸಿದ್ದಾರೆ. ಅಲ್ಲಿ ಉರ್ವ ಠಾಣೆಯ ಪಿಸಿಆರ್ ಪೊಲೀಸರು ಇದ್ದ ಕಾರಣ ಅವರ ಸಹಾಯದಲ್ಲಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ನಂತರ, ಕದ್ರಿ ಟ್ರಾಫಿಕ್ ಪೊಲೀಸರಿಗೆ ವಿಷಯ ತಿಳಿಸಿದ ಬಳಿಕ ಅವರು ಅಪಘಾತ ಸ್ಥಳಕ್ಕೆ ಬಂದಿದ್ದಾರೆ. ರಸ್ತೆ ಬದಿಯಲ್ಲಿದ್ದ ಪಿಕಪ್ ವಾಹನ ಚಾಲಕನನ್ನು ಇತರ ವಾಹನದಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೇರಳ ನೋಂದಣಿಯ ಪಿಕಪ್ ವಾಹನವಾಗಿದ್ದು, ಅವರ ಹೆಸರು ತಿಳಿದಿಲ್ಲ ಎಂದು ಮುರ್ಶಿದಾ ಬಾನು ತಿಳಿಸಿದ್ದಾರೆ.
ಮಹಿಳಾ ಕಾನ್ಸ್ಟೇಬಲ್ ಕರ್ತವ್ಯ ಪ್ರಜ್ಞೆಗೆ ಪ್ರಶಂಸೆಗಳ ಸುರಿಮಳೆ: ಮುರ್ಶಿದಾ ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಸುಕಿನ ಜಾವ ತಮ್ಮದೇ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದ ಅವರ ಮಾನವೀಯತೆಗೆ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ: ಬೆಂಗಳೂರು: ಲಿಫ್ಟ್ ಅಳವಡಿಸಲು ತೆಗೆದ ಗುಂಡಿಗೆ ಬಿದ್ದು 5 ವರ್ಷದ ಬಾಲಕ ಸಾವು