ಹಾವೇರಿ: ಜಿಲ್ಲೆಯಲ್ಲಿ ವರುಣನ ಆರ್ಭಟ ಇನ್ನಿಲ್ಲದ ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿದೆ. ಮೃತದೇಹಗಳ ಅಂತ್ಯಕ್ರಿಯೆಗೂ ಸಹ ಮಳೆರಾಯನ ಕಾಟ ಶುರುವಾಗಿದೆ. ನಗರದಲ್ಲಿರುವ ವೀರಶೈವ ರುದ್ರಭೂಮಿ, ಶವಸುಡುವ ಮುಕ್ತಿಧಾಮಗಳಲ್ಲಿ ಮಳೆಯಿಂದಾಗಿ ಅಂತ್ಯಕ್ರಿಯೆ ನಡೆಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಹೊರವಲಯದಲ್ಲಿರುವ ಮುಕ್ತಿಧಾಮದ ಪಕ್ಕದಲ್ಲಿ ಹಳ್ಳ ಹರಿಯುತ್ತಿದ್ದು ರಾತ್ರಿ ಸುರಿದ ಮಳೆಯಿಂದಾಗಿ ಮುಕ್ತಿಧಾಮದ ಸುತ್ತ ನೀರು ನುಗ್ಗಿದೆ. ಇನ್ನು ಮುಕ್ತಿಧಾಮದಲ್ಲಿ ಶವಸುಡಲು ಸಂಗ್ರಹಿಸಿದ್ದ ಕಟ್ಟಿಗೆಗಳು ಹಳ್ಳದಲ್ಲಿನ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಇದರಿಂದ ಶವ ಸುಡಲು ಸಾಕಷ್ಟು ಹರಸಾಹಸ ಪಡಬೇಕಾಗುತ್ತಿದೆ ಎನ್ನುತ್ತಿದ್ದಾರೆ ಇಲ್ಲಿಯ ಕಾರ್ಮಿಕರು. ಮಳೆ ನೀರಲ್ಲಿ ಕಟ್ಟಿಗೆ ಜೋಡಿಸುವುದು ಕೂಡಾ ದುಸ್ತರವಾಗಿದೆ.
ಹಾವೇರಿ ಹೆಗ್ಗೇರಿ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ಸಮುದಾಯದ ಬಹುತೇಕ ಶವಗಳನ್ನು ಹೂಳಲಾಗುತ್ತದೆ. ಆದರೆ ವೀರಶೈವ ರುದ್ರಭೂಮಿ ಸಹ ಜಲಾವೃತಗೊಂಡಿದೆ. ಎಲ್ಲೆಂದರಲ್ಲಿ ನೀರು ನಿಂತಿದ್ದು ಶವ ಹೂಳಲು ಗುಂಡಿ ತೆಗೆಯುವುದಕ್ಕೂ ಹರಸಾಹಸ ಪಡುವಂತಾಗಿದೆ.
ಹೆಗ್ಗೇರಿ ರುದ್ರಭೂಮಿ ಬಿಟ್ಟು ಇಜಾರಿ ಲಕಮಾಪುರದಲ್ಲಿರುವ ರುದ್ರಭೂಮಿಯಲ್ಲಿ ಗುಂಡಿ ತೆಗೆಯಲು ಹೋದರೆ ಅಲ್ಲಿ ಸಹ ನೀರು ಕಾಣಿಸಲಾರಂಭಿಸಿದೆ. ಈ ರೀತಿಯಾದರೆ ಶವಗಳನ್ನು ಎಲ್ಲಿ ಹೂಳಬೇಕು ಎಂದು ನಗರವಾಸಿಗಳು ಪ್ರಶ್ನಿಸುತ್ತಿದ್ದು, ಹೆಣ ಹೂಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ನೀರಿನಿಂದ ಆವೃತವಾಗುವ ಹೆಗ್ಗೇರಿ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯನ್ನು ಮಣ್ಣುಹಾಕಿ ಎತ್ತರಿಸಬೇಕು, ಇಲ್ಲವೇ ಶವ ಹೂಳಲು ಮಳೆನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ನಿಲ್ಲದ ಮಳೆ ಆರ್ಭಟ: ಫ್ಲೈಓವರ್ ಕೆಳಭಾಗ ಸಂಪೂರ್ಣ ಜಲಾವೃತ, ಜನರ ಪರದಾಟ