ಬೆಂಗಳೂರು :ರಾಜಧಾನಿ ಬೆಂಗಳೂರು ನಗರದಲ್ಲಿ ಅಕ್ರಮವಾಗಿ ಫ್ಲೆಕ್ಸ್ ಮತ್ತು ಹೋರ್ಡಿಂಗ್ಸ್‌ಗಳನ್ನು ಅಳವಡಿಸಿರುವ ಕುರಿತಂತೆ ಮಾಧ್ಯಮಗಳ ವರದಿ ಆಧರಿಸಿ, ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಅರ್ಜಿ ದಾಖಲಿಸಿಕೊಂಡಿದೆ. ಶುಕ್ರವಾರ ಬೆಳಗ್ಗೆ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಪ್ರಸ್ತಾಪಿಸಿದ ಮುಖ್ಯನ್ಯಾಯಮೂರ್ತಿ ಎನ್. ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ. ವಿ ಅರವಿಂದ ಅವರಿದ್ದ ನ್ಯಾಯಪೀಠ ಈ ಅರ್ಜಿ ದಾಖಲಿಸಿಕೊಂಡಿತು.
ಅಲ್ಲದೇ, ನ್ಯಾಯಾಂಗ ಆದೇಶಗಳನ್ನು ಉಲ್ಲಂಘಿಸಿದ ಪರಿಣಾಮ ನ್ಯಾಯಾಂಗ ನಿಂದನೆ ಕ್ರಮವನ್ನು ಏಕೆ ಪ್ರಾರಂಭಿಸಬಾರದು ಎಂಬುದಕ್ಕೆ ಜುಲೈ 26 ರ ಒಳಗಾಗಿ ಪ್ರತಿಕ್ರಿಯಿಸುವಂತೆ ಬಿಬಿಎಂಪಿ ಮತ್ತು ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು. ರಾಜ್ಯದಲ್ಲಿ 6.8 ಲಕ್ಷ ಅಕ್ರಮ ಜಾಹೀರಾತುಗಳನ್ನು ಅಳವಡಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜತೆಗೆ, ಅಕ್ರಮ ಜಾಹೀರಾತುಗಳ ಅಳವಡಿಕೆ ಮುಂದುವರೆದಿದ್ದು, ಇದರಿಂದಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ವಾಹನ ದಟ್ಟಣೆಗೂ ಕಾರಣವಾಗುತ್ತಿದೆ.
ಹೈಕೋರ್ಟ್ ಆದೇಶವನ್ನು ಸರ್ಕಾರದ ಪ್ರಾಧಿಕಾರಗಳು ಪಾಲನೆ ಮಾಡದೇ ನಿರ್ಲಕ್ಷ್ಯವಹಿಸುತ್ತಿವೆ ಎಂದು ಫ್ಲೆಕ್ಸ್‌ಗಳ ಹಾವಳಿ ತಡೆಗಟ್ಟಲು ವಿಫಲವಾಗಿರುವ ಪೊಲೀಸ್ ಆಯುಕ್ತರ ಕ್ರಮಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡಿತು.