ಬೆಂಗಳೂರು:ನ್ಯಾಯಾಲಯಗಳ ಆದೇಶವನ್ನು ಪಾಲಿಸಲು ಸರ್ಕಾರ ಮತ್ತದರ ಪ್ರಾಧಿಕಾರಗಳು ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಅನುಸರಿಸುತ್ತಿರುವ ಕುರಿತು ಹೈಕೋರ್ಟ್ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿಯನ್ನು ದಾಖಲಿಸಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ, ಕಲಾಪದ ವೇಳೆ ವಿಷಯ ಪ್ರಸ್ಥಾಪಿಸಿತು. ಅಲ್ಲದೇ, ನ್ಯಾಯಾಲಯಗಳ ಮೊರೆ ಹೋಗುವುದು ಸಾರ್ವಜನಿಕರ ಮೂಲಭೂತ ಹಕ್ಕಾಗಿದ್ದು, ಆದೇಶ ಪಾಲಿಸದಿರುವುದು ಜನರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ನ್ಯಾಯಾಲಯಗಳ ಆದೇಶ ಪಾಲಿಸಲು ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷವನ್ನು ಸಹಿಸಲಾಗದು. ಕೋರ್ಟ್ ಆದೇಶ ಜಾರಿಯ ವಿಳಂಬದಿಂದ ನ್ಯಾಯ ವಂಚಿಸಿದಂತಾಗಲಿದೆ ಎಂದು ಕಟುವಾಗಿ ಅಭಿಪ್ರಾಯಪಟ್ಟಿತು. ಇದೇ ವೇಳೆ, ಅರ್ಜಿ ಸಂಬಂಧ ಬಿಬಿಎಂಪಿ, ಬಿಡಿಎ ಹಾಗೂ ಕೆಐಎಡಿಬಿ ಸೇರಿದಂತೆ ಇನ್ನಿತರ ಸರ್ಕಾರಿ ಇಲಾಖೆಗಳು/ಪ್ರಾಧಿಕಾರಗಳಿಗೆ ನೋಟಿಸ್ ಜಾರಿಗೊಳಿಸಿ ಆದೇಶಿಸಿತು.
ಕಳೆದ ಎರಡು ವಾರ ಹಾಗೂ ಅದಕ್ಕಿಂತ ಹೆಚ್ಚು ಸಮಯದಲ್ಲಿ ನ್ಯಾಯಾಂಗ ನಿಂದನೆ ಕಾಯ್ದೆಯಡಿ ದಾಖಲಾಗಿದ್ದ ಹಲವು ಪ್ರಕರಣಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿದೆ. ಈ ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯಗಳ ಆದೇಶ ಹಾಗೂ ನಿರ್ದೇಶನಗಳನ್ನು ಪ್ರಾಧಿಕಾರ/ಅಧಿಕಾರಿಗಳು ಗಮನಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ. ಇದು ನೋವಿನ ಸಂಗತಿಯಾಗಿದೆ ಎಂದು ತಿಳಿಸಿರುವ ಹೈಕೋರ್ಟ್, ನ್ಯಾಯಾಂಗ ನಿಂದನೆ ಕಾಯ್ದೆಯಡಿ ದಾಖಲಾಗಿರುವ ಹಲವು ಪ್ರಕರಣಗಳನ್ನು ಆದೇಶದಲ್ಲಿ ಉದಾಹರಿಸಿದೆ.
ಅಲ್ಲದೆ, ನ್ಯಾಯಾಂಗ ನಿಂದನೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲದೇ ಉಳಿದ ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯ ನೀಡಿರುವ ಆದೇಶ/ನಿರ್ದೇಶನಗಳು ದೀರ್ಘಾವಧಿಯಿಂದ ಸಕಾರಣಗಳಿಲ್ಲದೆ ಪಾಲನೆಯಾಗದೆ ಉಳಿದಿವೆ. ಗೊತ್ತಿದ್ದು-ಗೊತ್ತಿಲ್ಲದೇ, ಕ್ಷಮೆ ನೀಡಿದ ಹಾಗೂ ಇತರೆ ನೆಪಗಳಿಂದ ನ್ಯಾಯಾಲಯಗಳ ಆದೇಶಗಳನ್ನು ಅಧಿಕಾರಿಗಳು ಕಡೆಗಣಿಸಿದ್ದಾರೆ. ನ್ಯಾಯಾಲಯಗಳ ಆದೇಶಗಳನ್ನು ನಿರ್ಲಕ್ಷಿಸುತ್ತಿರುವುದರಿಂದ ವ್ಯವಸ್ಥೆ ವಿಫಲವಾಗಿದೆ. ನ್ಯಾಯಾಲಯಗಳು ತನ್ನ ಅಧಿಕಾರವನ್ನು ಕಳೆದುಕೊಳ್ಳುತ್ತಿವೆ. ಅವುಗಳ ಆದೇಶಗಳು ಸರ್ಕಾರದ ಅಧಿಕಾರಿಗಳ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ ಎಂಬುದಾಗಿ ಸಾರ್ವಜನಿಕರು ನಿರ್ಧರಿಸುವ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದೆ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.