ಕರ್ನಾಟಕ

karnataka

ETV Bharat / state

ಸೆಣಬಿನ ಚೀಲಗಳಲ್ಲೇ ಶೇ.20ರಷ್ಟು ಸಕ್ಕರೆ ತುಂಬಲು ಕೇಂದ್ರದ ಆದೇಶ: ತಡೆ ತೆರವುಗೊಳಿಸಿದ ದ್ವಿಸದಸ್ಯ ಪೀಠ - Sugar Packing In Jute Bags - SUGAR PACKING IN JUTE BAGS

ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಸೆಣಬಿನ ಚೀಲಗಳಲ್ಲಿಯೇ ಪ್ಯಾಕಿಂಗ್ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಅಧಿಸೂಚನೆಗೆ ಮಧ್ಯಂತರ ತಡೆ ನೀಡಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ರದ್ದುಪಡಿಸಿದೆ.

Etv Bharat
Etv Bharat (Etv Bharat)

By ETV Bharat Karnataka Team

Published : Sep 28, 2024, 3:45 PM IST

ಬೆಂಗಳೂರು: ಸಕ್ಕರೆಯ ಒಟ್ಟು ಉತ್ಪಾದನೆಯಲ್ಲಿ ಶೇಕಡಾ 20ರಷ್ಟು ಪ್ರಮಾಣವನ್ನು ಕಡ್ಡಾಯವಾಗಿ ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಸೆಣಬಿನ ಚೀಲಗಳಲ್ಲಿಯೇ ಪ್ಯಾಕಿಂಗ್ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಅಧಿಸೂಚನೆಗೆ ಮಧ್ಯಂತರ ತಡೆ ನೀಡಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ರದ್ದುಪಡಿಸಿದೆ.

ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಆದೇಶ ಮಾಡಿದೆ.

ಮಧ್ಯಂತರ ಆದೇಶ ರದ್ದು: ಏಕಸದಸ್ಯ ನ್ಯಾಯಪೀಠ ನೀಡಿರುವುದು ಮಧ್ಯಂತರ ಆದೇಶವಾಗಿದ್ದು, ಅದು ಇನ್ನೂ ಅಂತಿಮವಾಗಬೇಕಿದೆ. ಆದಾಗ್ಯೂ, ಮೇಲ್ಮನವಿ ಪುರಸ್ಕರಿಸಲಾಗುತ್ತಿದ್ದು, ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಪಡಿಸಲಾಗುತ್ತಿದೆ ಎಂದು ವಿಭಾಗೀಯ ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಸಕ್ಕರೆಯ ಒಟ್ಟು ಉತ್ಪಾದನೆಯಲ್ಲಿ ಶೇ.20ರಷ್ಟನ್ನು ಕಡ್ಡಾಯವಾಗಿ ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡಬೇಕು ಎಂದು ಕೇಂದ್ರ ಜವಳಿ ಸಚಿವಾಲಯ 2023ರ ಡಿಸೆಂಬರ್​ 26 ಹಾಗೂ 2024ರ ಜೂನ್​ 28ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸೌತ್ ಇಂಡಿಯನ್ ಶುಗರ್ಸ್​ ಮಿಲ್ಸ್ ಅಸೋಸಿಯೇಷನ್-ಕರ್ನಾಟಕ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ಕೇಂದ್ರ ಸರ್ಕಾರದ ಅಧಿಸೂಚನೆಗೆ ಮಧ್ಯಂತರ ತಡೆ ನೀಡಿ, ವಿಚಾರಣೆ ಮುಂದೂಡಿತ್ತು.

ಈ ನಡುವೆ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈ ಮಧ್ಯೆ ಸೆಪ್ಟೆಂಬರ್​ 24ರಂದು ತನ್ನ ಮುಂದೆ ಅರ್ಜಿ ವಿಚಾರಣೆಗೆ ಬಂದಾಗ, ಅರ್ಜಿದಾರರ ಪರ ವಕೀಲರು ಮೇಲ್ಮನವಿಯ ವಿಷಯವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಅದರಂತೆ, ವಿಚಾರಣೆಯನ್ನು ಏಕಸದಸ್ಯ ನ್ಯಾಯಪೀಠ ದಸರಾ ರಜೆ ಬಳಿಕ ಮುಂದೂಡಿತ್ತು. ಇದೀಗ ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶವನ್ನು ರದ್ದುಪಡಿಸಿ, ವಿಭಾಗೀಯ ನ್ಯಾಯಪೀಠ ಆದೇಶಿಸಿದೆ.

ಇದನ್ನೂ ಓದಿ:ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿ ಬೇರೆ ಕಾರ್ಯಗಳಿಗೆ ಬಳಕೆ: ಹೈಕೋರ್ಟ್ ತೀವ್ರ ತರಾಟೆ - High Court

ABOUT THE AUTHOR

...view details