ಕರ್ನಾಟಕ

karnataka

ETV Bharat / state

ವೃತ್ತಿಪರ ಕೋರ್ಸ್​ಗಳಿಗೆ ಕ್ರೀಡಾ ಕೋಟಾದಲ್ಲಿ ಅರ್ಹತೆ ಮರು ಪರಿಶೀಲಿಸಲು ಕೆಇಎಗೆ ಹೈಕೋರ್ಟ್‌ ನಿರ್ದೇಶನ - High Court - HIGH COURT

ವೃತ್ತಿಪರ ಕೋರ್ಸ್​ಗಳಿಗೆ ಕ್ರೀಡಾ ಕೋಟಾದಲ್ಲಿ ಅರ್ಹತೆಯನ್ನು ಮರು ಪರಿಶೀಲಿಸಲು ಹೈಕೋರ್ಟ್​ ಕೆಇಎಗೆ ನಿರ್ದೇಶನ ನೀಡಿದೆ.

high-court
ಹೈಕೋರ್ಟ್ (ETV Bharat)

By ETV Bharat Karnataka Team

Published : Aug 21, 2024, 10:10 PM IST

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್​ಗಳ ಪ್ರವೇಶ ಸಂಬಂಧ ಕ್ರೀಡಾ ಕೋಟಾದ ಅರ್ಹತೆಗಳನ್ನು ಮರುಪರಿಶೀಲನೆ ನಡೆಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಕ್ಕೆ ಇಂದು ಹೈಕೋರ್ಟ್ ನಿರ್ದೇಶನ ನೀಡಿತು.

ಕೆಇಎ ನಿಗದಿಪಡಿಸಿರುವ ಕ್ರೀಡಾ ಕೋಟಾದ ಅರ್ಹತಾ ಮಾನದಂಡಗಳನ್ನು ಪ್ರಶ್ನಿಸಿ ಮೈಸೂರಿನ ಟೆನಿಸ್ ಆಟಗಾರ್ತಿ ದೀಕ್ಷಾ ಪ್ರಸಾದ್ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.

ಜೊತೆಗೆ, 18 ವರ್ಷದ ಅರ್ಜಿದಾರರನ್ನು ಕ್ರೀಡಾ ಕೋಟಾದ ಅರ್ಹರ ಪಟ್ಟಿಗೆ ಸೇರಿಸುವಂತೆಯೂ, ಆಕೆಗೆ ಕೌನ್ಸೆಲಿಂಗ್​ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆಯೂ ನ್ಯಾಯಾಲಯ ಇದೇ ವೇಳೆ ನಿರ್ದೇಶನ ನೀಡಿದೆ.

ಕೋವಿಡ್ ಸಾಂಕ್ರಾಮಿಕದ ಕಾರಣ ಕಳೆದ ಕೆಲವು ವರ್ಷಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ನಡೆದಿಲ್ಲ. ಹಾಗಾಗಿ ಮಾನದಂಡಗಳನ್ನು ಮರುಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಿಯಮದ ಪ್ರಕಾರ, ಅಭ್ಯರ್ಥಿ ಕ್ರೀಡಾ ಕೋಟಾದಲ್ಲಿ ಸೀಟು ಪಡೆಯಬೇಕಾದರೆ ಮೂರು ವರ್ಷ ಸತತವಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸಿ ಪದಕವನ್ನು ಜಯಿಸಿರಬೇಕು. ಈ ನಿಯಮದ ಪ್ರಕಾರ ಅರ್ಜಿದಾರರು ಕ್ರೀಡಾ ಕೋಟಾದಡಿ ಸೀಟು ಪಡೆಯಲು ಅರ್ಹತೆ ಹೊಂದಿದ್ದಾರೆ ಎಂದು ಎಂದು ಪೀಠಕ್ಕೆ ವಿವರಿಸಿದರು.

ಆದರೆ, ಕೊರೊನಾ ಕಾರಣದಿಂದ 2021 ಹಾಗೂ 2022ರಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆದಿರಲಿಲ್ಲ. ಆದರೆ 2022-23 ಹಾಗೂ 2023-24ನೇ ಸಾಲಿನ ಕ್ರೀಡಾಕೂಟಗಳು ಒಂದೇ ವರ್ಷ ನಡೆದಿವೆ. ಹಾಗಾಗಿ ಒಂದನ್ನು ಮಾತ್ರ ಕೆಇಎ ಪರಿಗಣಿಸುತ್ತಿರುವುದರಿಂದ ಅರ್ಜಿದಾರರು ಕ್ರೀಡಾ ಕೋಟಕ್ಕೆ ಅನರ್ಹರಾಗುತ್ತಾರೆ. ಆದ್ದರಿಂದ ಕೆಇಎಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿದರು.

ಕೆಇಎ ಪರ ವಾದ ಮಂಡಿಸಿದ ವಕೀಲರು, ಕೊರೊನಾ ಸೃಷ್ಟಿಸಿದ ವಿಚಿತ್ರ ಸನ್ನಿವೇಶದಿಂದಾಗಿ ಕ್ರೀಡಾ ಕೋಟಾದಡಿ ಸಾಕಷ್ಟು ಅರ್ಹ ಅಭ್ಯರ್ಥಿಗಳು ಪ್ರವೇಶ ಪಡೆಯಲಾಗಿಲ್ಲ. ಹಾಗಾಗಿ ಅರ್ಜಿದಾರರು ಸೇರಿದಂತೆ ಇತರರಿಗೆ ಅನ್ವಯವಾಗುವಂತೆ ಕ್ರೀಡಾ ಕೋಟಾ ಪಟ್ಟಿ ಪರಿಷ್ಕರಣೆಗೆ ನ್ಯಾಯಾಲಯ ಆದೇಶ ನೀಡಬೇಕೆಂದು ಮನವಿ ಮಾಡಿದರು. ವಾದ ಆಲಿಸಿದ ಬಳಿಕ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೆಇಎ ಕ್ರೀಡಾ ಕೋಟದ ಅರ್ಹತಾ ಮಾನದಂಡಗಳನ್ನು ಮರುಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ABOUT THE AUTHOR

...view details