ಬೆಂಗಳೂರು:ಗ್ರಾಮ ಪಂಚಾಯತ್ ಅಧ್ಯಕ್ಷರು ಅಥವಾ ಉಪಾಧ್ಯಕ್ಷರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು, ಅನರ್ಹಗೊಳ್ಳುವುದು ಮತ್ತು ಮರಣವನ್ನಪ್ಪಿದಲ್ಲಿ ಅದೇ ಹುದ್ದೆಗೆ ಆಯ್ಕೆಯಾದವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕನಿಷ್ಠ 15 ತಿಂಗಳು ಕಳೆದಿರಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅಧ್ಯಕ್ಷ/ಉಪಾಧ್ಯಕ್ಷರ ರಾಜೀನಾಮೆ ಬಳಿಕ ಆಯ್ಕೆಯಾದ ಸದಸ್ಯರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 15 ತಿಂಗಳು ಕಳೆಯಬೇಕಾದ ಅಗತ್ಯವಿಲ್ಲ ಎಂಬುದಾಗಿ ಆದೇಶಿಸಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಯಲಹಂಕ ತಾಲೂಕಿನ ಬಾಗಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಪ್ರೀತಿ ಮುನೇಗೌಡ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, "ಪಂಚಾಯತ್ ರಾಜ್‌ನಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಿಶ್ವಾಸವೆಂಬ ಅಸ್ತ್ರವು ಅಧಿಕಾರ ಕೂಗುಮರಿಗಳಿಂದ ಅಪಾಯಕಾರಿಯಾಗಿರಲಿದೆ. ಅನೈತಿಕ ರಾಜಕೀಯ ಹಿತಾಸಕ್ತಿ ಈಡೇರಿಸುವುದು ಮತ್ತು ಕ್ಷುಲ್ಲಕ ಕಾರಣಗಳಿಂದ ಅತೃಪ್ತಿ ಗುಂಪುಗಳಿಂದ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸುವ ಪ್ರವೃತ್ತಿಯನ್ನು ನಿಯಂತ್ರಿಸುವುದು ಪಂಚಾಯತ್ ರಾಜ್ ಕಾಯ್ದೆ ಸೆಕ್ಷನ್ 49(2)ರ ಮೂಲ ಉದ್ದೇಶವಾಗಿದೆ".
"ಹೀಗಾಗಿ 15 ತಿಂಗಳ ಕಾಲ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಅವಕಾಶವಿರುವುದಿಲ್ಲ. ಆದ್ದರಿಂದ ಅಧ್ಯಕ್ಷರ ಚುನಾವಣೆ ದಿನಾಂಕದಿಂದ ಮೊದಲ 15 ತಿಂಗಳವರೆಗೂ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ನಿರ್ಬಂಧವಿರಲಿದೆ" ಎಂದು ಪೀಠ ತಿಳಿಸಿದೆ. ಅಲ್ಲದೆ, "ಪ್ರಸ್ತುತದ ಪ್ರಕರಣದಲ್ಲಿ 2023ರ ಮಾರ್ಚ್ 7 ರಂದು ಅಧಿಕಾರ ವಹಿಸಿಕೊಂಡಿದ್ದು, ಪಂಚಾಯತ್ ರಾಜ್(ತಿದ್ದುಪಡಿ) ಕಾಯ್ದೆ 2021ರ ಸೆಕ್ಷನ್ 49ರ ಅಡಿಯಲ್ಲಿ ತಿಳಿಸಿರುವಂತೆ ಅಧಿಕಾರ ವಹಿಸಿಕೊಂಡ 15 ತಿಂಗಳ ಒಳಗಾಗಿ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿಲ್ಲ" ಎಂದು ಪೀಠ ಹೇಳಿದೆ.