ಕರ್ನಾಟಕ

karnataka

ETV Bharat / state

ಎಚ್ಚರಿಕೆ ಮಧ್ಯೆಯೂ ಹೇಳಿಕೆ ನೀಡುತ್ತಿರುವ ಸಚಿವರ ವರದಿ ಕೇಳಿದ ಹೈಕಮಾಂಡ್: ಕೆಪಿಸಿಸಿ ಕಾರ್ಯಾಧ್ಯಕ್ಷ - MANJUNATH BHANDARI

ಹೈಕಮಾಂಡ್​ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದ್ದರೂ, ಅದನ್ನು ಮೀರಿ ಹೇಳಿಕೆ ನೀಡುತ್ತಿರುವ ಸಚಿವರ ವರದಿಯನ್ನು ನೀಡುವಂತೆ ಕಾಂಗ್ರೆಸ್​ ಹೈಕಮಾಂಡ್​ ಸೂಚಿಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ (ETV Bharat)

By ETV Bharat Karnataka Team

Published : Jan 16, 2025, 12:20 PM IST

ದೆಹಲಿ/ಬೆಂಗಳೂರು:"ಪಕ್ಷದ ಶಿಸ್ತು ಉಲ್ಲಂಘಿಸಿ ಹೈಕಮಾಂಡ್ ಎಚ್ಚರಿಕೆ ಮಧ್ಯೆಯೂ ಬಹಿರಂಗ ಹೇಳಿಕೆ ನೀಡುತ್ತಿರುವ ಸಚಿವರ ವರದಿ ಕೇಳಿದ್ದಾರೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, "ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ನಾಯಕತ್ವವು ನಮ್ಮ ಪಕ್ಷದಲ್ಲಿ ಬಲಿಷ್ಠವಾಗಿದೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ, ಸಚಿವರನ್ನು ಯಾವಾಗ ಬದಲಾವಣೆ ಮಾಡಬೇಕು? ಮುಂದುವರಿಸಬೇಕು ಅಥವಾ ಯಾರಾಗಬೇಕು? ಎಂಬಿತ್ಯಾದಿ ಎಲ್ಲ ವಿಷಯಗಳನ್ನು ಪಕ್ಷದ ಹೈಕಮಾಂಡ್ ನಾಯಕರು ನಿರ್ಧಾರ ಮಾಡಲಿದ್ದಾರೆ."

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ (ETV Bharat)

"ಆದರೆ, ಈ ಸಂಬಂಧ ಯಾವುದೇ ಸಚಿವರು ಹೇಳಿಕೆಯನ್ನು ಕೊಡಬಾರದು. ನಾಯಕತ್ವ ಬದಲಾವಣೆಯ ತೀರ್ಮಾನವನ್ನು ತೆಗೆದುಕೊಳ್ಳುವುದು ಮಾಧ್ಯಮಗಳಲ್ಲ. ನಮ್ಮ ಪಕ್ಷದ ಹೈಕಮಾಂಡ್ ಆಗಿದೆ. ಹೀಗಾಗಿ ಪಕ್ಷದ ನಾಯಕರು ಯಾವುದೇ ವಿಷಯಗಳಿದ್ದರೂ ಮೊದಲಿಗೆ ಹೈಕಮಾಂಡ್ ನಾಯಕರ ಗಮನಕ್ಕೆ ತರಬೇಕೇ ವಿನಃ ಮಾಧ್ಯಮಗಳ ಮುಂದಲ್ಲ. ಇಂಥ ಹೇಳಿಕೆ ನೀಡಿರುವವರ ವರದಿಯನ್ನು ಹೈಕಮಾಂಡ್‌ ನಾಯಕರು ಕೇಳಿದ್ದಾರೆ" ಎಂದು ತಿಳಿಸಿದ್ದಾರೆ.

"ಕಳೆದ ಒಂದೂವರೆ ವರ್ಷದಿಂದ ಸಚಿವರು ತಮ್ಮ ಇಲಾಖೆಯಲ್ಲಿ ಯಾವ ರೀತಿ ಕಾರ್ಯನಿರ್ವಹಣೆ ಮಾಡಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಹಾಗೂ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದರು. ಆದರೆ ಅನೇಕ ಸಚಿವರು ಅನಗತ್ಯ ಗೊಂದಲ ಉಂಟು ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಅಂತಹವರ ಸಂಪೂರ್ಣ ವರದಿಯನ್ನು ಹೈಕಮಾಂಡ್​ ಕೇಳಿದೆ" ಎಂದಿದ್ದಾರೆ.

"ಜಿಲ್ಲಾ ಪ್ರವಾಸ ಹೋದಂತಹ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿದ್ದಾರಾ? ಇಲ್ಲವಾ? ಪಕ್ಷದ ಸಂಘಟನೆಗೆ ಒತ್ತು ಕೊಡಲಾಗುತ್ತದೆಯೋ ಇಲ್ಲವೋ. ಪ್ರಣಾಳಿಕೆಯಲ್ಲಿ ಕೊಟ್ಟಿರುವ ಯೋಜನೆಗಳನ್ನು ಜಾರಿ ಮಾಡಲು ಇವರು ಪಕ್ಷ ಮತ್ತು ಸರ್ಕಾರಕ್ಕೆ ಸಹಕಾರ ಕೊಡುತ್ತಿದ್ದಾರೋ ಇಲ್ಲವೋ? ಇದಲ್ಲದೆ ತಮ್ಮ ಇಲಾಖೆಯಲ್ಲಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿದ್ದಾರಾ ಇಲ್ಲವಾ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೈಕಮಾಂಡ್‌ ಈ ಸಂದರ್ಭದಲ್ಲಿ ಕೇಳಿದೆ. ಅಲ್ಲದೆ, ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಪದೇ ಪದೆ ಮಾಧ್ಯಮಗಳಿಗೆ ಹೇಳಿಕೆ ಕೊಡುವ ಸಚಿವರ ಸಂಪೂರ್ಣ ವಿವರಗಳನ್ನು ಕೊಡುವಂತೆ ಹೈ ಕಮಾಂಡ್‌ ಸೂಚಿಸಿದೆ" ಎಂದು ತಿಳಿಸಿದ್ದಾರೆ.

"ಈಗಾಗಲೇ ಎಐಸಿಸಿ ಕರ್ನಾಟಕ ಉಸ್ತುವಾರಿ ಆಗಿರುವ ರಣದೀಪ್ ಸುರ್ಜೇವಾಲ ಅವರು, ಪಕ್ಷ ತಾಯಿ ಇದ್ದಂತೆ, ಸರ್ಕಾರ ಮಗು ಇದ್ದಂತೆ. ಯಾರೂ ಸಹ ಪಕ್ಷದ ಘನತೆಗೆ ಚ್ಯುತಿ ತರಬಾರದು ಎಂಬ ಸಂದೇಶವನ್ನು ನೀಡಿದ್ದಾರೆ. ಇದರ ಮಧ್ಯೆಯೂ ಕೆಲವು ನಾಯಕರು ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಕೆಲವು ಸಚಿವರು ಪದೇ ಪದೆ ಮಾತನಾಡುತ್ತಿದ್ದಾರೆ. ಇದು ಸರಿ ಅಲ್ಲವೇ ಅಲ್ಲ."

"ಆದರೆ, ಸಚಿವರಾದ ತಿಮ್ಮಾಪುರ, ಸತೀಶ್ ಜಾರಕಿಹೊಳಿ ಹಾಗೂ ಹೆಚ್.ಸಿ. ಮಹದೇವಪ್ಪ ಅವರು ಪದೇ ಪದೆ ಮಾತನಾಡುತ್ತಿದ್ದು, ಹೈಕಮಾಂಡ್ ಗಂಭೀರವಾಗಿ ಎಲ್ಲವನ್ನೂ ಗಮನಿಸುತ್ತಿದೆ. ಎಲ್ಲ ಸಚಿವರ ರಿಪೋರ್ಟ್ ಕಾರ್ಡ್‌ಗಳನ್ನು ಸಹ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಪಕ್ಷದ ನಾಯಕತ್ವದ ಬಗ್ಗೆ ಮಾತನಾಡಬಾರದು ಎಂದು ಹೈಕಮಾಂಡ್ ಸೂಚನೆ ನೀಡಿದ ಮೇಲೆಯೂ ಪಕ್ಷದ ಆದೇಶವನ್ನು ಉಲ್ಲಂಘನೆ ಮಾಡುವವರಿಗೆ ಮುಂದಿನ ದಿನಗಳಲ್ಲಿ ಅವರಿಗೆ ಪರಿಣಾಮ ಬೀರಲಿದೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ" ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ:ಕೆಪಿಸಿಸಿಗೆ ಪೂರ್ಣ ಪ್ರಮಾಣದ ಹೊಸ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡಲಿ: ಸಚಿವ ಸತೀಶ್ ಜಾರಕಿಹೊಳಿ

ABOUT THE AUTHOR

...view details