ಬೆಂಗಳೂರು: ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಸುಳಿಗಾಳಿ ಎದ್ದು ಮುಂಗಾರು ಮಾರುತಗಳು ರಾಜ್ಯ ಪ್ರವೇಶಿಸಿವೆ. ಕಳೆದ ವರ್ಷ ಜೂನ್ 15ರಂದು ಮುಂಗಾರು ಮಾರುತ ಪ್ರವೇಶಿಸಿತ್ತು. ಆದರೆ ಈ ಬಾರಿ ಅವಧಿಗೆ ಮೊದಲೇ ರಾಜ್ಯಕ್ಕೆ ಮುಂಗಾರು ಮಾರುತ ಪ್ರವೇಶ ಮಾಡಿದೆ. ಹೀಗಾಗಿ ಹವಾಮಾನ ಇಲಾಖೆ ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈಗಾಗಲೇ ಮಳೆಗೆ ನಗರದ ಅನೇಕ ಕಡೆ ಭಾರೀ ಅವಾಂತರಗಳು ಸಂಭವಿಸಿವೆ. ಭಾನುವಾರ ಸಂಜೆ ಕೂಡ ಸಿಲಿಕಾನ್ ಸಿಟಿಯಲ್ಲಿ ಮಳೆ ಆರ್ಭಟ ಶುರುವಾಗಿದ್ದು, ಹಲವೆಡೆ ಸುರಿಯುತ್ತಿದೆ.
ನಗರದ ಶೇಷಾದ್ರಿಪುರಂ, ಶಿವಾನಂದ ಸರ್ಕಲ್, ವಿಜಯನಗರ, ಶಿವಾಜಿನಗರ, ಮಲ್ಲೇಶ್ವರಂ, ವಸಂತನಗರ, ಶಾಂತಿನಗರ, ಜಯನಗರ, ಯಶವಂತಪುರ, ರಾಜಾಜಿನಗರ, ಕೋರಮಂಗಲ, ಎಂ.ಜಿ ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವೆಡೆ ಮಳೆಯಾಗುತ್ತಿದೆ. ನಿನ್ನೆ ಕೂಡ ಭರ್ಜರಿ ಮಳೆ ಆಗಿದ್ದು, ಇಂದು ಸಹ ಮಳೆ ಮುಂದುವರೆದಿದೆ. ಈ ವಾರ ಪೂರ್ತಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.