ಕರ್ನಾಟಕ

karnataka

ಹೆಬ್ಬಾಳ ಖಾಸಗಿ ಶಾಲೆಯ ಪಠ್ಯದಲ್ಲಿ ನಟಿ ತಮನ್ನಾ ಭಾಟಿಯಾ ಕುರಿತು ಪಾಠ: ಪೋಷಕರಿಂದ ವಿರೋಧ - Tamannaah Bhatia In Text Book

By ETV Bharat Karnataka Team

Published : Jun 27, 2024, 7:39 PM IST

Updated : Jun 27, 2024, 8:33 PM IST

ಹೆಬ್ಬಾಳದ ಖಾಸಗಿ ಹೈಸ್ಕೂಲ್​ ಪಠ್ಯದಲ್ಲಿ ನಟಿ ತಮನ್ನಾ ಭಾಟಿಯಾ ಕುರಿತು ಸೇರಿಸಿರುವುದು ವಿವಾದಕ್ಕೆ ಗುರಿಯಾಗಿದೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟಿ ತಮನ್ನಾ ಭಾಟಿಯಾ
ನಟಿ ತಮನ್ನಾ ಭಾಟಿಯಾ (ETV Bharat)

ಬೆಂಗಳೂರು: ದೇಶದ ವಿಭಜನೆಯ ನಂತರ ಸಿಂಧ್‌ ಸಮುದಾಯದ ಜೀವನ ಸ್ಥಿತಿಗತಿಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯಿಸಲು ಆ ಸಮುದಾಯದ ಸಾಧಕರ ಕುರಿತ ಪಾಠದಲ್ಲಿ ನಟಿ ತಮನ್ನಾ ಭಾಟಿಯಾ ಕುರಿತ ಅಧ್ಯಾಯ ಸೇರಿಸಿರುವುದು ವಿವಾದಕ್ಕೀಡಾಗಿದೆ. ಈ ಕುರಿತು ಪೋಷಕರು ಶಾಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮಕ್ಕಳ ರಕ್ಷಣಾ ಆಯೋಗದ ಮೊರೆ ಹೋಗಿದ್ದಾರೆ.

ಹೆಬ್ಬಾಳದ ಸಿಂಧಿ ಹೈಸ್ಕೂಲ್ ಇದೀಗ ನಟಿ ತಮನ್ನಾ ಭಾಟಿಯಾ ಪಠ್ಯ ಅಳವಡಿಸಿಕೊಂಡು ವಿವಾದಕ್ಕೆ ಸಿಲುಕಿದೆ. 7ನೇ ತರಗತಿಯ ಪಠ್ಯಪುಸ್ತಕದಲ್ಲಿನ ಒಂದು ಅಧ್ಯಾಯ ದೇಶದ ವಿಭಜನೆಯ ನಂತರದ ಸಿಂಧ್ ಜನತೆಯ ಸ್ಥಿತಿಗತಿ, ಸಿಂಧ್‌ನಲ್ಲಿ ವಲಸೆ ಸೇರಿದಂತೆ 1947 ರಿಂದ 1962ರ ವರೆಗಿನ ಅಂಶಗಳು ಇವೆ. ಸಮುದಾಯದ ಯಶಸ್ವಿ ಸದಸ್ಯರ ಬಗ್ಗೆ ನಟ ರಣವೀರ್ ಸಿಂಗ್, ತಮನ್ನಾ ಭಾಟಿಯಾ ಸೇರಿದಂತೆ ಪ್ರಮುಖ ಸಿಂಧಿ ಸಮುದಾಯದವರ ಕುರಿತ ಮಾಹಿತಿಯನ್ನು ನೀಡಲಾಗಿದೆ. ಆದರೆ ಇದರಲ್ಲಿ ತಮನ್ನಾ ಭಾಟಿಯಾ ಹೆಸರಿಗೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖಾಸಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ಮಕ್ಕಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ.

ನಟಿ ತಮನ್ನಾ ಭಾಟಿಯಾ ಹಸಿ ಬಿಸಿ, ಬೋಲ್ಡ್ ದೃಶ್ಯಗಳಲ್ಲಿ ನಟಿಸುತ್ತಾರೆ. ಅವರು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರು ಮಕ್ಕಳಿಗೆ ಯಾವ ರೀತಿ ಆದರ್ಶರಾಗಲು ಸಾಧ್ಯ? ಅಂತರ್ಜಾಲದಲ್ಲಿ ತಮನ್ನಾ ಬಗ್ಗೆ ಸರ್ಚ್ ಮಾಡಿದರೆ ವಯಸ್ಸಿಗೆ ಸೂಕ್ತವಲ್ಲದ ವಿಷಯಗಳು ಬರಲಿವೆ. ಇದರಿಂದ ಮಕ್ಕಳು ಬೇರೆಯ ರೀತಿಯಲ್ಲಿ ಆಕರ್ಷಣೆಗೆ ಒಳಗಾಗುವ ಸಾಧ್ಯತೆ ಇದೆ ಎನ್ನುವ ಅತಂಕವನ್ನು ಪೋಷಕರು ವ್ಯಕ್ತಪಡಿಸಿದ್ದಾರೆ. ಇದನ್ನೇ ಶಾಲಾ ಆಡಳಿತ ಮಂಡಳಿ ಗಮನಕ್ಕೆ ತಂದು ತಮನ್ನಾ ಪಠ್ಯ ಕೈಬಿಡುವಂತೆ ಒತ್ತಾಯ ಮಾಡಿರುವುದಾಗಿ ಪೋಷಕರು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆದರೆ ಪೋಷಕರ ವಿರೋಧವನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ತಿಳಿದುಬಂದಿದೆ.

1947 ರಿಂದ 1962 ರ ವರೆಗೆ ಸಿಂಧ್ ವಿಭಜನೆಯ ನಂತರದ ಜೀವನ, ವಲಸೆ, ಸಮುದಾಯ ಮತ್ತು ಕಲಹ ವಿಷಯಗಳನ್ನು ಈ ಪಠ್ಯ ಒಳಗೊಂಡಿದೆ. ಸಿಂಧ್ ಭಾಷಾ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಸಮುದಾಯದ ಸಾಧಕರನ್ನು ಬಳಸಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಪಠ್ಯವನ್ನು ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ.

ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ. ಜೊತೆಗೆ ಪೋಷಕರು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮೊರೆ ಹೋಗುವ ಮೂಲಕ ಶಾಲೆಯ ಆಡಳಿತ ಮಂಡಳಿ ವಿರುದ್ಧ ಸಿಡಿದು ನಿಂತಿದ್ದಾರೆ.

ಇದನ್ನೂ ಓದಿ: ಸಿಎಂ ಸ್ಥಾನ ಬಿಟ್ಟುಕೊಡಬೇಕೆಂಬ ಚಂದ್ರಶೇಖರ್ ಸ್ವಾಮೀಜಿ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ? - CM Siddaramaiah

Last Updated : Jun 27, 2024, 8:33 PM IST

ABOUT THE AUTHOR

...view details