ಮೈಸೂರು : ಕೇರಳದ ವಯನಾಡಿನಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ 54 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ಜಲಾಶಯದಿಂದ ಕಪಿಲಾ ನದಿಗೆ 80 ಸಾವಿರಕ್ಕೂ ಹೆಚ್ಚಿನ ಕ್ಯೂಸೆಕ್ ನೀರನ್ನ ಕಪಿಲಾ ನದಿಗೆ ಬಿಡಲಾಗಿದೆ. ಪರಿಣಾಮ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ಇದರಿಂದ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಜಲದಿಗ್ಬಂಧನ ಉಂಟಾಗಿದೆ.
ಕಪಿಲೆಯ ಅಬ್ಬರಕ್ಕೆ ನಂಜನಗೂಡಿನ ಮಲ್ಲನ ಮೂಲೆಮಠ, ಬಸವೇಶ್ವರ ಲಿಂಗದ ಗುಡಿ, ಕಾಶಿ ವಿಶ್ವನಾಥ ದೇವಾಲಯ, ಚಾಮುಂಡೇಶ್ವರಿ ದೇವಾಲಯ, ಅಯ್ಯಪ್ಪ ಸ್ವಾಮಿ ದೇವಾಲಯ, ದತ್ತಾತ್ರೇಯ ದೇವಾಲಯ ಹಾಗೂ ಪರುಶುರಾಮ ದೇವಾಲಯಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಅಷ್ಟೇ ಅಲ್ಲ, ಐತಿಹಾಸಿಕ 16 ಕಾಲು ಮಂಟಪ ಮತ್ತು ಹಳೆಯ ವೆಲ್ಲೆಸ್ಲಿ ಸೇತುವೆಗಳು ಮುಳುಗಡೆಯಾಗಿದ್ದು, ತಗ್ಗು ಪ್ರದೇಶದ ಜಮೀನುಗಳಿಗೆ ಹಾಗೂ ಸ್ಮಶಾನಕ್ಕೆ ಕಪಿಲಾ ನದಿ ಪ್ರವಾಹದ ನೀರು ನುಗ್ಗಿದೆ. ಇನ್ನೊಂದು ಕಡೆ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಹತ್ತಿರಕ್ಕೂ ನೀರು ನುಗ್ಗಿದ್ದು, ದೇವಾಲಯದ ಬಳಿಯ ಮುಡಿಕಟ್ಟೆ, ಸೋಪಾನದ ಕಟ್ಟೆ, ದಾಸೋಹ ಭವನ, ಪಾರ್ಕಿಂಗ್ ಸ್ಥಳ ಹಾಗೂ ಹಳ್ಳದ ಕೇರಿಗೂ ನೀರು ಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂದು ನಂಜನಗೂಡಿನ ತಾಲೂಕು ಆಡಳಿತ ಎಲ್ಲಾ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಿದೆ.
ಗಂಜಿ ಕೇಂದ್ರಕ್ಕೆ ಸಂತ್ರಸ್ತರು ಸ್ಥಳಾಂತರ: ಕಬಿನಿ ಜಲಾಶಯದಿಂದ ಹೆಚ್ಚಿನ ನೀರನ್ನ ಕಪಿಲಾ ನದಿಗೆ ಬಿಡುತ್ತಿರುವ ಹಿನ್ನೆಲೆ ನಂಜನಗೂಡು ಬಳಿಯ ವರುಣಾ ಕ್ಷೇತ್ರದ ಬೊಕ್ಕ ಹಳ್ಳಿ ಗ್ರಾಮಕ್ಕೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಗ್ರಾಮದ ಜನರನ್ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದರು. ಟಿ. ನರಸೀಪುರ ತಾಲ್ಲೂಕಿನ ತಲಕಾಡು ಹೋಬಳಿಯ ತಡಿ ಮಲಂಗಿ ಗ್ರಾಮದ ಜನರನ್ನ ಜಿಲ್ಲಾಡಳಿತ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಕಾಳಜಿ ಕೇಂದ್ರದಲ್ಲಿ ಜನರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಕಪಿಲಾ ನದಿಯಲ್ಲಿ ನೀರು ಕಡಿಮೆಯಾದ ತಕ್ಷಣ ಪುನಃ ಜನರನ್ನ ವಾಪಾಸ್ ಮನೆಗಳಿಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಮ್ಮೀಕಾಂತ್ ರೆಡ್ಡಿ ಮಾಹಿತಿ ನೀಡಿದರು.