ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮುಂದುವರಿಯಲಿದೆ. ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಗುಡುಗುಸಹಿತ ಮಳೆ ಬೀಳುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶನಿವಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಗೋಕರ್ಣ, ಮಂಕಿ, ಚಿಕ್ಕಮಗಳೂರಿನ ಕೊಪ್ಪ, ಕಮ್ಮರಡಿ, ಬಾಳೆಹೊನ್ನೂರು, ಜಯಪುರ, ಕೊಟ್ಟಿಗೆಹಾರ, ಕಡೂರು, ಎನ್.ಆರ್.ಪುರ, ಉಡುಪಿಯ ಕುಂದಾಪುರ, ಕೋಟ, ಸಿದ್ದಾಪುರ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಸುಳ್ಯ, ಉತ್ತರ ಕನ್ನಡದ ಹಳಿಯಾಳ, ಮುಂಡಗೋಡು ಹಾಗು ಯಲ್ಲಾಪುರದಲ್ಲಿ ವರ್ಷಧಾರೆಯಾಗಿದೆ.
ಎಲ್ಲೆಲ್ಲಿ ಮಳೆ?:ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮುಂದಿನ ಮೂರು ದಿನ ಮಳೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆಯಲ್ಲಿ ಏ.21ರಂದು ಭಾರಿ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮುಂದಿನ ಮೂರು ದಿನ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೆಲವು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಿತ್ತು. ಹಲವೆಡೆ 2ರಿಂದ 3 ದಿನಗಳಿಂದ ನಿರಂತರವಾಗಿ ಮಳೆಯೂ ಸುರಿಯುತ್ತಿದೆ. ಮೋಡ ಕವಿದ ವಾತಾವರಣ ಸೇರಿದಂತೆ ಇತರ ಕಾರಣಗಳಿಂದಲೂ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಇಳಿಮುಖವಾಗಿದೆ. ಈ ಮೊದಲು ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿತ್ತು. ಈಗ ಮಳೆಯಿಂದಾಗಿ 37ರಿಂದ 38 ಡಿಗ್ರಿ ಉಷ್ಣಾಂಶ ಕಂಡುಬಂದಿದೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲೂ ತಾಪಮಾನ ಇಳಿದಿದೆ ಎಂದು ಇಲಾಖೆ ತಿಳಿಸಿದೆ.