ಬೆಂಗಳೂರು: ನಗರದಲ್ಲಿ ಜೂನ್ ತಿಂಗಳ ಮೊದಲ ದಿನವೇ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದ್ದು, ಜೂನ್ 8ರವರೆಗೆ ನಗರದಲ್ಲಿ ವ್ಯಾಪಕ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶನಿವಾರ ನಗರದ ಹಲವೆಡೆಗಳಲ್ಲಿ ಮಿಂಚು - ಗುಡುಗು ಸಹಿತ ವ್ಯಾಪಕ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ಆಲಿಕಲ್ಲು ಬಿದ್ದಿವೆ. ಹಲವು ದಿನಗಳ ವಿರಾಮದ ಬಳಿಕ ಬೆಂಗಳೂರಿನಲ್ಲಿ ಮತ್ತೆ ಮಳೆಯಾಗುತ್ತಿರುವುದು ಜನರ ಖುಷಿ ಹೆಚ್ಚಿಸಿದ್ದು, ಕೆಲ ಕಾಲದ ಬಿಡುವಿನಲ್ಲಿ ಭಾರಿ ಸೆಖೆಯಿಂದ ಬೇಸತ್ತಿದ್ದ ಜನಕ್ಕೆ ಮಳೆ ತಂಪೆರದಿದೆ. ನಗರದಲ್ಲಿ ಬೆಳಗ್ಗೆಯಿಂದ ತಾಪಮಾನ ಹೆಚ್ಚಿದ್ದು, ಮಳೆ ಬಂದ ಬಳಿಕ ತಂಪಿನ ವಾತಾವರಣ ಕಂಡು ಬಂದಿದೆ.
ಹೆಬ್ಬಾಳದ ಬಿಇಎಲ್ ಸರ್ಕಲ್ನ ಸುರಂಗ ಮಾರ್ಗದಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಒಂದೆಡೆ ಜಲಾವೃತ್ತಗೊಂಡ ರಸ್ತೆಗಳಿಂದ ಸವಾರರು ಅವಸ್ಥೆಪಟ್ಟರೆ ಮತ್ತೊಂದೆಡೆ ರಸ್ತೆಗುಂಡಿಗಳು ವಾಹನ ಸವಾರರಿಗೆ ಮತ್ತಷ್ಟು ಸಮಸ್ಯೆಯನ್ನುಂಟು ಮಾಡಿದವು. ಮಳೆ ನೀರು ನಿಂತು ರಸ್ತೆಗುಂಡಿ ಕಾಣದೇ ವಾಹನ ಸವಾರರು ಜೀವ ಪಣಕ್ಕಿಟ್ಟು ವಾಹನ ಚಲಾಯಿಸಬೇಕಾಯಿತು. ಮಾರತ್ ಹಳ್ಳಿ ಜಂಕ್ಷನ್ನಲ್ಲಿ ಸವಾರರು ನೀರಿನಲ್ಲಿ ಮುಳುಗಿದ ರಸ್ತೆ ಗುಂಡಿ ದಾಟಲು ಹರಸಾಹಸ ಪಡಬೇಕಾಯಿತು. ಸರ್ಜಾಪುರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಇಡೀ ಪ್ರದೇಶ ನದಿಯಂತಾಗಿದೆ.
ಶಿವಾಜಿನಗರ, ಬೆಳ್ಳಂದೂರು, ಮಾರತಹಳ್ಳಿ, ಹೆಬ್ಬಾಳ, ವಿದ್ಯಾರಣ್ಯಪುರ, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಪದ್ಮನಾಭನಗರ, ಉತ್ತರಹಳ್ಳಿ, ರಾಜರಾಜೇಶ್ವರಿ ನಗರ, ಸದಾಶಿವನಗರ, ಶೇಷಾದ್ರಿಪುರ, ಬೊಮ್ಮನಹಳ್ಳಿ, ಬಸವನಗುಡಿ, ಮಹಾಲಕ್ಷ್ಮಿ ಲೇಔಟ್, ದೊಮ್ಮಲೂರು, ವಿಜಯನಗರ ಸೇರಿದಂತೆ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಆರಂಭವಾಗಿದ್ದು, ಬಹುತೇಕ ಪ್ರದೇಶಗಳಲ್ಲಿ ಇಂದು ಭಾರಿ ಮಳೆ ಸುರಿಯಲಾರಂಭಿಸಿದೆ. ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಸುಳಿಗಾಳಿ ಎದ್ದಿರುವ ಕಾರಣ ಕರ್ನಾಟಕದಲ್ಲಿ ಮಳೆಯಾಗಿದೆ. ಕೇರಳ ಪ್ರವೇಶಿಸಿರುವ ಮಾನ್ಸೂನ್ ಒಂದೆರಡು ದಿನಗಳಲ್ಲಿ ಕರ್ನಾಟಕಕ್ಕೂ ಲಗ್ಗೆಯಿಡಲಿದೆ. ಸಾಮಾನ್ಯವಾಗಿ ಜೂನ್ 7ರ ನಂತರ ಮುಂಗಾರು ಕರ್ನಾಟಕವನ್ನು ಪ್ರವೇಶಿಸುತ್ತದೆ. ಆದರೆ, ಈ ಬಾರಿ ಬಹುಬೇಗ ಅದರ ಪ್ರವೇಶವಾಗಲಿದೆ. ಮುಂಗಾರು ಈಗಾಗಲೇ ಕೇರಳವನ್ನು ಪ್ರವೇಶಿಸಿದ್ದು, ಒಂದೆರಡು ದಿನಗಳಲ್ಲಿ ಮಾನ್ಸೂನ್ ಕರ್ನಾಟಕಕ್ಕೂ ಲಗ್ಗೆಯಿಡಲಿದೆ ಎಂದು ಇಲಾಖೆಯ ಅಧಿಕಾರಿ ಸಿಎಸ್ ಪಾಟೀಲ್ ಹೇಳಿದ್ದಾರೆ.
ಜಿಲ್ಲೆಗಳಲ್ಲಿ ಮತ್ತೆ ಮಳೆ:ಜೂನ್ 1ರಿಂದ ಮಳೆ ಅಬ್ಬರ ಮತ್ತೆ ಶುರುವಾಗುವ ನಿರೀಕ್ಷೆ ಇತ್ತು. ಆದರೆ, ಜೂನ್ ಆರಂಭದಲ್ಲೇ ಮಳೆಯ ಆರ್ಭಟದ ಮುನ್ಸೂಚನೆ ದೊರೆತಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕೊಡಗು ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ ಮಳೆಯ ಮುನ್ಸೂಚನೆ ಇತ್ತು. ಬೆಂಗಳೂರು ಸುತ್ತಮುತ್ತ ಕೂಡ ಮಳೆಯಾಗುವ ನಿರೀಕ್ಷೆ ಇತ್ತು. ಅದರಂತೆ ಈಗ ಮಳೆ ಅಬ್ಬರ ಶುರುವಾಗಿದೆ. ಅಲ್ಲದೆ, ಜೂನ್ 3 ರಂದು ಮಳೆ ಮತ್ತಷ್ಟು ಹೆಚ್ಚಾಗಲಿದೆ.
ಇದನ್ನೂ ಓದಿ:ಮುಂಗಾರು ಮಾರುತಗಳು ರಾಜ್ಯಕ್ಕೆ ಅಪ್ಪಳಿಸಲು ಸಜ್ಜು: ಹವಾಮಾನ ಇಲಾಖೆಯಿಂದ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ - Orange Alert To Four District