ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆಯಿಂದ ಆರ್ಜಿಎ ಟೆಕ್ ಪಾರ್ಕ್ ರಸ್ತೆ ಕೆರೆಯಂತಾಗಿದೆ. ಫ್ಲೈಓವರ್ ಕೆಳಭಾಗ ಸಂಪೂರ್ಣ ಜಲಾವೃತವಾಗಿದ್ದು, ಜನ ರಸ್ತೆಯಲ್ಲಿ ಸಂಚರಿಸಲಾಗದೆ ಪರದಾಡುತ್ತಿದ್ದಾರೆ. ಇನ್ನುಳಿದಂತೆ, ಎಂ ಜಿ ರೋಡ್, ರೇಸ್ ಕೋರ್ಸ್ ಮಲ್ಲೇಶ್ವರಂ ಯಶವಂತಪುರ ಬಾಣಸ್ವಾಡಿ ಕುಮಾರಸ್ವಾಮಿ ಲೇಔಟ್ ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಹವಾಮಾನ ಇಲಾಖೆಯು ಇಂದೂ ಕೂಡ ಯೆಲ್ಲೋ ಅಲರ್ಟ್ ನೀಡಿದೆ. ನಾಳೆಯೂ ಸಹ ಭಾರಿ ಮಳೆ ಆಗುವ ಸಾಧ್ಯತೆ ಇದೆ.
ಬುಧವಾರ ಸಂಜೆ ಸುರಿದ ಮಳೆಯಿಂದಾಗಿ ಬೆಂಗಳೂರು ದಕ್ಷಿಣ ಸಮೀಪದ ಯಲಚೇನಹಳ್ಳಿಯ ರಾಮಕೃಷ್ಣನಗರ ಮತ್ತು ಫಯಾಜಾಬಾದ್‌ನಲ್ಲಿ ಸುಮಾರು 100 ಮನೆಗಳು ಜಲಾವೃತವಾಗಿವೆ. ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಲ್ಲಿ ಬೃಹತ್ ಮರವೊಂದು ಧರೆಗುರುಳಿದ್ದು, ಮರದ ಕೆಳಗೆ ನಿಲ್ಲಿಸಿದ್ದ ಮೂರು ಕಾರುಗಳು ಜಖಂಗೊಂಡಿವೆ.
ಒಟ್ಟು 1,079 ಮನೆಗಳಿಗೆ ಈಗಾಗಲೆ ನುಗ್ಗಿದ ನೀರನ್ನು ತೆರವುಗೊಳಿಸು ಕಾರ್ಯ ನಡೆಸಲಾಗುತ್ತಿದೆ. ಇಂದೂ ಕೂಡ ನಗರದಲ್ಲೆಡೆ ಧಾರಾಶಾಹಿಯಾದ ಒಟ್ಟು 89 ಮರ ಮತ್ತ ಮರದ ಕೊಂಬೆಗಳು ಪೈಕಿ 52 ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಳ್ಳಲಾಗಿದೆ. ಬುಧವಾರ ಮಳೆ ಕೊಂಚ ತಗ್ಗಿದ್ದರೂ ಸಂಗ್ರಹವಾಗಿರುವ ನೀರನ್ನು ಹೊರಹಾಕಲು ನಿವಾಸಿಗಳು ಪರದಾಡುತ್ತಿದ್ದಾರೆ. ಬಿಬಿಎಂಪಿ ಸಿಬ್ಬಂದಿ, ಪಂಪ್ಸೆಟ್ ಮೂಲಕ ನಿಂತಿರುವ ನೀರನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಎಲ್ಲೆಲ್ಲಿ ಸಮಸ್ಯೆ:ಯಲಹಂಕದ ವಲಯದ ಕೇಂದ್ರಿಯ ವಿಹಾರ್ ಅಪಾರ್ಟ್ಮೆಂಟ್, ಜಕ್ಕೂರು ಬಳಿಯ ಡೈನಷ್ಟಿ ಲೇಔಟ್, ಮಹದೇವಪುರ ವಲಯದ ಬೆಸ್ಲಿಂಗ್ ಗಾರ್ಡನ್, ಚಿನ್ನಪ್ಪನಹಳ್ಳಿ, ಸಮಪ್ತಗಿರಿ ಲೇಔಟ್, ಮಧುರಾನಗರ, ಜಿನ್ನಸಂದ್ರ ಮುಖ್ಯರಸ್ತೆ, ಗ್ರೀನ್ ಲೇಔಟ್, ಸಾಯಿ ಲೇವಟ್, ವಡ್ಡರಪಾಳ್ಯ, ದಾಸರಹಳ್ಳಿ ವಲಯದ ನಿಸರ್ಗ ಲೇಔಟ್, ಪಾರ್ವತಿ ಲೇಔಟ್, ಮಿತ್ರಾ ಲೇಔಟ್, ಪೀಣ್ಯ ಕೈಗಾರಿಕಾ ಪ್ರದೇಶ, ಬೆಲ್ಮಾರ್ಗ್ ಲೇಔಟ್ ನಲ್ಲಿ ಇನ್ನೂ ನೀರು ನಿಂತ ದೃಶ್ಯಾವಳಿಗಳು ಕಂಡು ಬರುತ್ತಿದೆ.
ಎಲ್ಲೆಲ್ಲಿ ಎಷ್ಟು ಮಳೆ:ಕಳೆದ 24 ಗಂಟೆಗಳಲ್ಲಿ ಬಿಟಿಎಂ ಲೇಔಟ್ನಲ್ಲಿ 38 ಮಿಲಿ ಮೀಟರ್, ದೊರೆಸಾನಿಪಾಳ್ಯ 37, ಪುಲಿಕೇಶಿನಗರ 35, ಬೊಮ್ಮನಹಳ್ಳಿ 33, ಮಾರತ್ತಹಳ್ಳಿ 30, ಸಂಪಂಗಿರಾಮನಗರ 28, ಹಂಪೆನಗರ 28, ಕಾಡುಗೋಡಿ 27, ಅರಕೆರೆ 26, ಹೆಚ್ಎಸ್ಆರ್ಲೇಔಟ್ 24, ಮಾರುತಮಂದಿರ 23, ಎಚ್ಎಎಲ್ ಲೇಔಟ್ 20, ಹಗದೂರು 20, ವಿ.ನಾಗೇನಹಳ್ಳಿ 14 ಮಿಮೀ ಮಳೆ ಸುರಿದಿದೆ.