ಕರ್ನಾಟಕ

karnataka

ಚಿಕ್ಕಮಗಳೂರು: ಕಳಸದಲ್ಲಿ ಧರೆಗುರುಳಿದ ಗುಡ್ಡ, ತುಂಗಾ ತಟದ ಕಪ್ಪೆ ಶಂಕರ ದೇವಾಲಯ ಮುಳುಗಡೆ - Heavy Rain in Chikkamagaluru

By ETV Bharat Karnataka Team

Published : Jul 30, 2024, 4:13 PM IST

Updated : Jul 30, 2024, 5:42 PM IST

ಜಿಲ್ಲೆಯಲ್ಲಿ ರಾತ್ರಿಯಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ, ಅಲ್ಲಿಲ್ಲಿ ಗುಡ್ಡ ಕುಸಿದಿದ್ದು, ಕಾಫಿ, ಅಡಿಕೆ ತೋಟಗಳು ನಾಶವಾಗಿವೆ. ಶೃಂಗೇರಿ ಪಟ್ಟಣದಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು, ತುಂಗೆ ತುಂಬಿ ಹರಿಯುತ್ತಿದ್ದಾಳೆ.

heavy rain in chikkamagaluru hill collapse in kalasa kappe shankar temple submerged
ಚಿಕ್ಕಮಗಳೂರು: ಕಳಸದಲ್ಲಿ ಧರೆಗುರುಳಿದ ಗುಡ್ಡ, ತುಂಗಾ ತಟದ ಕಪ್ಪೆ ಶಂಕರ ದೇವಾಲಯ ಮುಳುಗಡೆ (ETV Bharat)

ಚಿಕ್ಕಮಗಳೂರು:ಜಿಲ್ಲೆಯಲ್ಲಿ ಮತ್ತೆ ಮುಂಗಾರು ಚುರುಕು ಪಡೆದುಕೊಂಡಿದ್ದು, ಪಶ್ಚಿಮಘಟ್ಟ ಸಾಲು ಹಾಗೂ ಕುದುರೆಮುಖ ಭಾಗದಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಬೆನ್ನಲ್ಲೇ ಅವಘಡಗಳು ವರದಿಯಾಗುತ್ತಿವೆ. ಕಳಸ ತಾಲೂಕಿನ ಚನ್ನಹಡ್ಲು ಗ್ರಾಮ ಹಾಗೂ ಮಲ್ಲೇಶ್ವರದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದೆ. ರಸ್ತೆಯ ಅರ್ಧ ಭಾಗಕ್ಕೆ ಗುಡ್ಡದ ಮಣ್ಣು ಬಿದ್ದಿದ್ದು, ಬಾಳೆಹೊಳೆ, ಚನ್ನಹಡ್ಲು, ಬಾಳೆಹೊನ್ನೂರು ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ.

ಚಿಕ್ಕಮಗಳೂರು: ಕಳಸದಲ್ಲಿ ಧರೆಗುರುಳಿದ ಗುಡ್ಡ, ತುಂಗಾ ತಟದ ಕಪ್ಪೆ ಶಂಕರ ದೇವಾಲಯ ಮುಳುಗಡೆ (ETV Bharat)

2019ರಲ್ಲಿ ಕುಸಿತ ಕಂಡಿದ್ದ ಸ್ಥಳದ ಸಮೀಪವೇ ಧರೆ ಕುಸಿತ ಉಂಟಾಗಿದ್ದು, ಆ ಸಮಯದಲ್ಲಿ ಹತ್ತಾರು ಕೋಟಿ ನಷ್ಟ ಉಂಟಾಗಿತ್ತು. ಅದೆಷ್ಟೋ ಮನೆಗಳು ಕಣ್ಮರೆಯಾಗಿದ್ದವು. ತೋಟಕ್ಕೆ ತೋಟವೇ ಕೊಚ್ಚಿ ಹೋಗಿದ್ದವು. ಮಲ್ಲೇಶ್ವರ ಗುಡ್ಡ ಕುಸಿತದಿಂದ ಮನೆಗೆ ಹಾನಿಯಾಗಿತ್ತು. ಮತ್ತೆ ಅದೇ ಸ್ಥಳದಲ್ಲಿ ಕುಸಿತ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಮತ್ತೆ ಈ ಬಾರಿ ಅತಹದ್ದೇ ದುರ್ಘಟನೆ ನಡೆಯದೇ ಇರಲಿ ಎಂದು ಜನರು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಕಾಫಿ ತೋಟಗಳು, ಹಾಗೂ ಅಡಿಕೆ ತೋಟಗಳು ಕುಸಿತವಾಗಿದ್ದು, ಹೆಚ್ಚಾಗಿ ಮೂಡಿಗೆರೆ ತಾಲ್ಲೂಕು ಹಾಗು ಕಳಸ ತಾಲೂಕಿನಲ್ಲಿ ಈ ರೀತಿಯ ಘಟನೆಗಳು ಜರುಗುತ್ತಿವೆ. ಮಲೆನಾಡು ಭಾಗದಲ್ಲಿ ಕಳೆದ ರಾತ್ರಿಯಿಂದ ನಿರಂತರವಾಗಿ ಮಳೆ ಅಬ್ಬರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅವಘಡಗಳು ಸಂಭವಿಸುವ ಆತಂಕ ಶುರುವಾಗಿದೆ.

ತುಂಬಿ ಹರಿಯುತ್ತಿರುವ ತುಂಗಾ- ಕಪ್ಪೆ ಶಂಕರ ದೇವಾಲಯ ಮುಳುಗಡೆ: ತುಂಗಾ ನದಿ ಸಂಪೂರ್ಣವಾಗಿ ತುಂಬಿ ಹರಿಯುತ್ತಿದ್ದು, ತುಂಗಾ ತಟದಲ್ಲಿರುವ ಕಪ್ಪೆ ಶಂಕರ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ. ಸ್ನಾನಘಟ್ಟವೂ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಮುಂಜಾಗ್ರತ ಕ್ರಮವಾಗಿ ತುಂಗಾ ನದಿತೀರದ ಹಾಗೂ ಪ್ರವಾಸಿ ಸ್ಥಳಗಳಿಗೆ ನಿಷೇಧ ಹೇರಲಾಗಿದೆ.

ಶೃಂಗೇರಿ ತಾಲೂಕಿನಲ್ಲಿ ಧಾರಾಕಾರ ಮಳೆ ಅಬ್ಬರಿಸುತ್ತಿದ್ದು, ಭಾರೀ ಮಳೆಯಿಂದಾಗಿ ತುಂಗಾ ನದಿಯ ಅಬ್ಬರ ಮಿತಿ ಮೀರಿ ಹೋಗುತ್ತಿದೆ. ಶೃಂಗೇರಿ ಪಟ್ಟಣದ ಗಾಂಧಿ ಮೈದಾನ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಆ ಭಾಗದಲ್ಲಿರುವ ಅಂಗಡಿ ಮಳಿಗೆಗಳು, ಭಾರತಿ ತೀರ್ಥ ರಸ್ತೆಯೂ ಮುಳುಗಡೆಯಾಗಿದೆ. ಮತ್ತೆ ತುಂಗಾ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನದಿಯತ್ತ ಜನರು ಓಡಾಡದಂತೆ ನಿಷೇಧ ಹೇರಲಾಗಿದೆ.

ತಾತ್ಕಾಲಿಕವಾಗಿ ಸುಮಾರು 20ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನು ಸ್ಥಳೀಯ ತಾಲೂಕು ಆಡಳಿತ ಮುಚ್ಚಿಸಿದ್ದು, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಿಗೆ ತೆರಳದಂತೆ ಪೊಲೀಸರನ್ನು ನಿಯೋಜಿಸಿ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗಿದೆ. ಕ್ಷಣದಿಂದ ಕ್ಷಣಕ್ಕೆ ನದಿಯ ಹರಿವಿನ ಮಟ್ಟದಲ್ಲಿ ಹೆಚ್ಚಳ ಕಂಡುಬರುತ್ತಿದೆ. ರಸ್ತೆ ಸಂಚಾರದಲ್ಲಿ ಸಂಪೂರ್ಣ ಅಡಚಣೆ ಉಂಟಾಗಿದ್ದು, ಅಲ್ಲಲ್ಲಿ ರಸ್ತೆ ಮುಳುಗಡೆ, ಸೇತುವೆ ಮುಳುಗಡೆ ಕುರಿತು ವರದಿಯಾಗುತ್ತಿವೆ. ಗಾಳಿ ಮಳೆಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿ ಬೀಳುತ್ತಿದ್ದು, ಹತ್ತಾರು ಹಳ್ಳಿ ಜನರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.

ಇದನ್ನೂ ಓದಿ:ವಯನಾಡ್‌ ಭೂಕುಸಿತ: ಜೀವ ಉಳಿಸಿಕೊಳ್ಳಲು ಅಂಗಲಾಚುತ್ತಿರುವ ಸಂತ್ರಸ್ತರು; ಇಂದೂ ಕೂಡಾ ಧಾರಾಕಾರ ಮಳೆ - Wayanad Landslide

Last Updated : Jul 30, 2024, 5:42 PM IST

ABOUT THE AUTHOR

...view details