ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಅಬ್ಬರಿಸಿದ ಮಳೆರಾಯ, ಕಾಪಿನಾಡು ತತ್ತರ - Chikkamagaluru Rain - CHIKKAMAGALURU RAIN

ಚಿಕ್ಕಮಗಳೂರು ನಗರದಲ್ಲಿ ಸುರಿದ ನಿರಂತರ ಮಳೆಗೆ ಸಂಜೀವಿನಿ ಶಾಲೆಯ ಕಾಂಪೌಂಡ್ ಕುಸಿದು ಬಿದ್ದಿದ್ದು, ನಾಲ್ಕು ಬೈಕ್​ಗಳು ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿವೆ. ಬೋರನಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗೊಬ್ಬರದ ಅಂಗಡಿಗೆ ಮೋರಿ ನೀರು ನುಗ್ಗಿ ರಾಸಾಯನಿಕ ಗೊಬ್ಬರ, ಸಿಮೆಂಟ್ ನೀರುಪಾಲಾಗಿದೆ.

heavy rain in Chikmagalur dist
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಪಾರ ಮಳೆ ಸುರಿದಿದೆ (ETV Bharat)

By ETV Bharat Karnataka Team

Published : May 19, 2024, 9:22 PM IST

ಚಿಕ್ಕಮಗಳೂರು: ಮಳೆ ಇಲ್ಲದೆ ಕಂಗೆಟ್ಟು ಬರಗಾಲಕ್ಕೆ ತುತ್ತಾಗಿದ್ದ ರಾಜ್ಯಕ್ಕೆ ವರುಣರಾಯ ಕೃಪೆ ತೋರಿದ್ದಾನೆ. ಮಲೆನಾಡಿನಿಂದ ಹಿಡಿದು ಬಯಲು ಸೀಮೆವರೆಗೆ ಈಗ ಎಲ್ಲೆಲ್ಲೂ ಮಳೆಯೋ ಮಳೆ. ಚಿಕ್ಕಮಗಳೂರು ಜಿಲ್ಲಾದ್ಯಂತ ವರುಣರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದು, ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಮತ್ತೊಂದು ಕಡೆ ನಿರಂತರ ಮಳೆಯಿಂದ ವಿವಿಧೆಡೆ ನಷ್ಟವುಂಟಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

ಹೌದು, ಇದೇ 15 ದಿನಗಳ ಹಿಂದೆ ಮಳೆಗಾಗಿ ಆಕಾಶದತ್ತ ನೋಡ್ತಿದ್ದ ಜನರಿಗೆ ವರುಣರಾಯ ಈಗ ಕೃಪೆ ತೋರಿದ್ದಾನೆ. ಮಲೆನಾಡಿನಿಂದ ಹಿಡಿದು ಬಯಲು ಸೀಮೆವರೆಗೂ ಮಳೆ ಆರ್ಭಟ ಜೋರಾಗಿದೆ. ಮಲೆನಾಡು ಜಿಲ್ಲೆ, ಕಾಫಿ ನಾಡು ಚಿಕ್ಕಮಗಳೂರಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದೆ. ರಾತ್ರಿ ಹಗಲೆನ್ನದೆ ಬಿರುಗಾಳಿ ಸಹಿತ ಸುರಿದ ಮಳೆಗೆ ಕಾಫಿ ನಾಡು ಅಕ್ಷರಶ ತತ್ತರಿಸಿ ಹೋಗಿದೆ.

ಕಳೆದ ರಾತ್ರಿ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಚಿಕ್ಕಮಗಳೂರು ನಗರದ ಕಲ್ಯಾಣ ನಗರದ ಸಂಜೀವಿನಿ ಶಾಲೆಯ ಕಾಂಪೌಂಡ್ ಕುಸಿದು ಬಿದ್ದಿದೆ. ಕಾಂಪೌಂಡ್​ದಡಿ ಸಿಲುಕಿ ನಾಲ್ಕು ಬೈಕ್​ಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಬೋರನಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗೊಬ್ಬರದ ಅಂಗಡಿಗೆ ಮೋರಿ ನೀರು ನುಗ್ಗಿ ಲಕ್ಷಾಂತರ ರೂಪಾಯಿ ರಾಸಾಯನಿಕ ಗೊಬ್ಬರ, ಸಿಮೆಂಟ್ ನೀರುಪಾಲಾಗಿದೆ.

ವಿವಿಧೆಡೆ ರಸ್ತೆ ಸಂಪರ್ಕ ಕಡಿತ, ಅಪಾರ ಹಾನಿ:ಇತ್ತ ಇದೇ ಗ್ರಾಮದ ಬಡ ಕುಟುಂಬದ ಗುಡಿಸಲಿಗೆ ಚರಂಡಿ ನೀರು ನುಗ್ಗಿ, ಕುಟುಂಬದ ಬದುಕು ನೀರುಪಾಲಾಗಿದೆ. ಜೊತೆಗೆ ಚಿಕ್ಕಮಗಳೂರು ತಾಲೂಕಿನ ಆಲೂರು ಗ್ರಾಮದ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಸ್ವಲ್ಪದರಲ್ಲೇ ಕುಟುಂಬಸ್ಥರು ಅಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯ ಪೀಠೋಪಕರಣಗಳು ನಾಶವಾಗಿವೆ.

ಅಷ್ಟೇ ಅಲ್ಲದೆ ಕೊಪ್ಪ, ಎನ್ ಆರ್ ಪುರ, ಕಳಸ, ಬಾಳೆಹೊನ್ನೂರು, ಮಾಗುಂಡಿ, ಕಡೂರು, ಬೀರೂರು ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು ರಸ್ತೆಗಳ ಮೇಲೆ ನೀರು ನದಿಯಂತೆ ಹರಿಯಲು ಪ್ರಾರಂಭ ಮಾಡಿದೆ. ಇನ್ನು ಮಲೆನಾಡು ಅಷ್ಟೇ ಅಲ್ಲದೆ ಬಯಲು ಸೀಮೆ ಭಾಗದಲ್ಲೂ ಮಳೆಯ ಆರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಕಡೂರು ತಾಲೂಕಿನಲ್ಲಿ ನಿನ್ನೆ ತಡರಾತ್ರಿ ಸುರಿದ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿದು ಚೆಕ್ ಡ್ಯಾಮ್​​ಗಳು ತುಂಬುವ ಹಂತಕ್ಕೆ ತಲುಪಿವೆ. ವೇದಾವತಿ ನದಿ ಅಬ್ಬರಕ್ಕೆ ಕಡದಿನಕೆರೆ ಗ್ರಾಮದಲ್ಲಿ ರಸ್ತೆಯೊಂದು ಕೊಚ್ಚಿ ಹೋಗಿದ್ದು, ಚೌಳ ಹಿರಿಯೂರು ರಸ್ತೆ ಸಂಪರ್ಕ ಬಂದ್ ಆಗಿದೆ.

ಇತ್ತ ಜಿಲ್ಲೆಯಲ್ಲಿ ಮಳೆಯಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಒಣಗಲು ಆರಂಭಿಸಿದ್ದ ತೋಟಗಳಿಗೆ ಈಗ ಚೈತನ್ಯ ಮೂಡಿದೆ. ಮತ್ತೊಂದು ಕಡೆ ತರೀಕೆರೆಯಲ್ಲಿಯೂ ಮಳೆ ಬೀಳುತ್ತಿದ್ದು, ರಸ್ತೆ ಕಳಪೆ ಕಾಮಗಾರಿ ಎಡವಟ್ಟಿನಿಂದ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಮನೆಯೊಳಗಿದ್ದ ಅಪಾರ ಪ್ರಮಾಣದ ದವಸ ಧಾನ್ಯ ನೀರಿಗೆ ಸಿಲುಕಿ ನಷ್ಟವುಂಟಾಗಿದೆ. ಅಧಿಕಾರಿಗಳ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲು ಸೀಮೆ ಭಾಗದಲ್ಲಿ ಮತ್ತಷ್ಟು ಮಳೆ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದ್ದು, ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ.

ಇದನ್ನೂಓದಿ:ಪೂರ್ವ ಮುಂಗಾರು ಅಬ್ಬರ: ಯಲಹಂಕದಲ್ಲಿ ಪ್ರವಾಹ ಪರಿಸ್ಥಿತಿ, ವಿಲ್ಲಾಗಳು ಜಲಾವೃತ - Heavy rain in Bengaluru

ABOUT THE AUTHOR

...view details