ಕಳಸದ ಹೆಬ್ಬಾಳೆ ಸೇತುವೆ ಮುಳುಗಡೆ (ETV Bharat) ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕಳಸದ ಬಳಿ ಇರುವ ಹೆಬ್ಬಾಳೆ ಸೇತುವೆಯ ಮುಳುಗಡೆಯಾಗಿದೆ.
ಸೇತುವೆ ಮುಳುಗಡೆಯಾಗಿದ್ದರಿಂದ ಕಳಸ - ಹೊರನಾಡು ಸಂಪರ್ಕ ಕಡಿತವಾಗಿದೆ. ಕುದುರೆಮುಖ, ಶೃಂಗೇರಿ, ಕೊಪ್ಪ ಸುತ್ತ ಮುತ್ತ ಧಾರಾಕಾರ ಮಳೆ ಆಗುತ್ತಿರುವ ಪರಿಣಾಮ ನದಿಗಳ ಹರಿವಿನ ಮಟ್ಟದಲ್ಲಿಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಭಾಗದಲ್ಲಿ ವಾಹನ ಸಂಚಾರದಲ್ಲಿ ಸಂಪೂರ್ಣ ಅಡಚಣೆ ಉಂಟಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಳಸ ಪೊಲೀಸರು ಎರಡು ಭಾಗದಲ್ಲೂ ಬ್ಯಾರಿಕೇಡ್ಗಳನ್ನು ಅಳವಡಿಸಿ ಸೇತುವೆ ಮೇಲೆ ಸಂಚಾರ ನಿರ್ಬಂಧಿಸಿದ್ದಾರೆ.
ಬಾಳೆಹೊನ್ನೂರಿನಲ್ಲಿಯೂ ಭದ್ರಾ ನದಿ ತುಂಬಿ ಹರಿಯುತ್ತಿದ್ದು, ಈ ಭಾಗದಲ್ಲಿಯೂ ನದಿಗೆ ಇಳಿಯದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಯಾವ ಕ್ಷಣದಲ್ಲಾದರೂ ಅಪಾಯ ಎದುರಾಗಬಹುದು ಆದ್ದರಿಂದ ಯಾರೂ ಕೂಡ ನದಿಗೆ ಇಳಿಯಬಾರದು ಹಾಗೂ ನದಿ ಪಾತ್ರದಲ್ಲಿ ವಾಸವಾಗಿರುವ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ದನದ ಕೊಟ್ಟಿಗೆ ನೆಲಸಮ:ಭಾರಿ ಗಾಳಿ, ಮಳೆಗೆ ದನದ ಕೊಟ್ಟಿಗೆ ನೆಲಸಮವಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಜಾಣಿಗೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲಕ್ಷ್ಮಣ್ ಗೌಡ ಎಂಬುವರಿಗೆ ಸೇರಿದ ದನದ ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದೆ. ಈ ವೇಳೆ, ಕೊಟ್ಟಿಗೆಯಲ್ಲಿದ್ದ ಹಸುಗಳಿಗೆ ಸಣ್ಣ ಪುಟ್ಟ ಗಾಯವಾಗಿದೆ.
ದತ್ತ ಪೀಠಕ್ಕೆ ಹೋಗುವ ಮಾರ್ಗದಲ್ಲೂ ಗುಡ್ಡ ಕುಸಿತ ಉಂಟಾಗಿದ್ದು, ಐದರಿಂದ ಆರು ಕಡೆ ಕುಸಿದಿರುವ ಗುಡ್ಡದ ಮಣ್ಣಿನಿಂದ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರ ವಾಹನಗಳಿಗೆ, ಹಾಗೂ ಪ್ರವಾಸಿಗರಿಗೆ ಅತಿ ಸೂಕ್ಷ್ಮ ಪ್ರದೇಶಗಳಿಗೆ ಜಿಲ್ಲಾಡಳಿತ ನಿಷೇಧ ಹೇರಿದೆ.
ಶೃಂಗೇರಿಯಲ್ಲಿ ಪ್ರವಾಹ ಭೀತಿ: ನಿರಂತರ ಮಳೆಯಿಂದಾಗಿ ಶೃಂಗೇರಿಯಲ್ಲಿ ತುಂಗಾ ನದಿ ಹುಕ್ಕಿಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ತುಂಗಾ ನದಿ ಅಬ್ಬರಕ್ಕೆ ಭಾರತಿ ತೀರ್ಥ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದ್ದು, ಪಟ್ಟಣದ ಗಾಂಧಿ ಮೈದಾನವು ಸಂಪೂರ್ಣ ಮುಳುಗಡೆಯಾಗಿದೆ. ನದಿ ಪಾತ್ರದ ಸುತ್ತಮುತ್ತ ನೂರಾರು ಅಂಗಡಿ ಮುಂಗಟ್ಟುಗಳಿದ್ದು, ನೀರು ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿವೆ. ಭಾರತಿ ತೀರ್ಥ ರಸ್ತೆ ಮುಳುಗಡೆ ಆದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗಿದೆ.
ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಮಳೆ ಅವಾಂತರ: ಧರೆ ಕುಸಿದು ಶಿರಸಿ - ಕುಮಟಾ ಹೆದ್ದಾರಿ ಬಂದ್, ಸವಾರರು ಈ ಮಾರ್ಗ ಬಳಸಿ - Landslide in Uttara Kannada