ಕರ್ನಾಟಕ

karnataka

ETV Bharat / state

ಉತ್ತರಕನ್ನಡಲ್ಲಿ ವರುಣಾರ್ಭಟ: ಕರಾವಳಿ ತಾಲೂಕುಗಳ ಶಾಲೆಗಳಿಗೆ ಸೋಮವಾರವೂ ರಜೆ - Rain In Uttara Kannada - RAIN IN UTTARA KANNADA

ಉತ್ತರಕನ್ನಡಲ್ಲಿ ವರ್ಷಧಾರೆ ಮುಂದುವರೆದಿದ್ದು, ಸೋಮವಾರವೂ ಕೂಡ ಕರಾವಳಿ ಭಾಗದ 5 ತಾಲೂಕುಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಮುಂದುವರೆಸಲಾಗಿದೆ.

rain
ಉತ್ತರಕನ್ನಡಲ್ಲಿ ಮಳೆ ಅವಾಂತರ (ETV Bharat)

By ETV Bharat Karnataka Team

Published : Jul 7, 2024, 10:27 PM IST

ಕಾರವಾರ (ಉತ್ತರ ಕನ್ನಡ):ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಅಬ್ಬರಿಸುತ್ತಿದ್ದ ಮಳೆ ಮಧ್ಯಾಹ್ನದ ವೇಳೆಗೆ ಕೊಂಚ ಕಡಿಮೆಯಾಗಿದೆ. ಆದರೆ ಇದೇ ಮಳೆಗೆ ಹೊನ್ನಾವರದ ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿದಿದ್ದು, ಕುಮಟಾದ ವಾಲಗಳ್ಳಿಯಲ್ಲಿ ಮನೆಯೊಂದು ಸಂಪೂರ್ಣ ನೆಲೆಸಮಗೊಂಡಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ.

ಮಳೆಯಿಂದ ಭಟ್ಕಳದ ಹೆದ್ದಾರಿಯಲ್ಲಿ ಮತ್ತೆ ನೀರು ತುಂಬಿಕೊಂಡು ಆತಂಕ ಸೃಷ್ಟಿಯಾಗಿತ್ತು. ಹೊನ್ನಾವರದ ಕರ್ನಲ್ ಹಿಲ್ ಬಳಿ ಗುಡ್ಡ ಕುಸಿದ ಕಾರಣ ರಾಷ್ಟ್ರೀಯ ಹೆದ್ದಾರಿ 66ರ ಒಂದು ಬದಿ ಸಂಚಾರ ಸಂಪೂರ್ಣ ಬಂದಾಗಿತ್ತು. ಬಳಿಕ ವಾಹನ ಸಂಚಾರವನ್ನು ಏಕಮುಖವಾಗಿ ಬಿಟ್ಟು, ಹೆದ್ದಾರಿಯಲ್ಲಿದ್ದ ಮಣ್ಣನ್ನು ತೆರವು ಮಾಡಲಾಯಿತು.

ಕುಸಿದು ಬಿದ್ದ ಮನೆ (ETV Bharat)

ಮನೆ ನೆಲಸಮ:ಕುಮಟಾದ ವಾಲಗಳ್ಳಿ ಗ್ರಾ.ಪಂ ವ್ಯಾಪ್ತಿಯ ಕೋಟೆಗುಡ್ಡದಲ್ಲಿ ನಿರಂತರ ಗಾಳಿ ಮಳೆಗೆ ವಾಸ್ತವ್ಯದ ಮನೆಯೊಂದು ನೆಲಸಮವಾಗಿದೆ. ಕೋಟೆಗುಡ್ಡದ ರಘು ಹಮ್ಮು ಮುಕ್ರಿ ಅವರಿಗೆ ಸೇರಿದ ಮನೆಯ ಗೋಡೆ ಸಹಿತ ಸಂಪೂರ್ಣ ಕುಸಿತವಾಗಿದ್ದು, ಲಕ್ಷಾಂತರ ರೂ. ಸ್ವತ್ತು, ದಿನಬಳಕೆ ವಸ್ತುಗಳಿಗೆ ಹಾನಿಯಾಗಿದೆ. ಘಟನೆ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಬಹುದೊಡ್ಡ ಅವಘಡ ತಪ್ಪಿದಂತಾಗಿದೆ. ಸದ್ಯ ಮನೆಯನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಕೋಟೆಗುಡ್ಡದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಘಟನಾ ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷೆ ಶಾಂತಿ ಮಡಿವಾಳ, ಕಂದಾಯ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಂಕೋಲಾದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಹಾರವಾಡದ ಬಳಿ ಮತ್ತೆ ಕಡಲಕೊರೆತ ಉಂಟಾಗಿದೆ. ಇದರಿಂದ ತೆಂಗಿನ ಮರಗಳು ನೆಲಕ್ಕುರುಳಿವೆ. ಕಡಲಕೊರೆತ ಮುಂದುವರೆದಲ್ಲಿ ಇಲ್ಲಿಯ ಸಮೀಪದ ಎರಡು ಮನೆಗಳಿಗೆ ಹಾನಿಯಾಗುವ ಆತಂಕ ಎದುರಾಗಿದೆ. ಇದಲ್ಲದೆ ಕಾರವಾರದ ದೇವಭಾಗ, ನಗರದ ಟ್ಯಾಗೋರ ಕಡಲತೀರದ ಅಜ್ವಿ ಹೋಟೆಲ್ ಹಿಂಭಾಗದಲ್ಲಿಯೂ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿದ್ದು, ಈ ಭಾಗದಲ್ಲಿ ಮರಗಳು ಊರುಳುವ ಆತಂಕ ಎದುರಾಗಿದೆ.

ತರಕಾರಿ ಮಾರುಕಟ್ಟೆ (ETV Bharat)

ಆರೆಂಜ್ ಅಲರ್ಟ್:ಜಿಲ್ಲೆಯ ಮಲೆನಾಡು ಭಾಗಗಳಲ್ಲಿಯೂ ಮಧ್ಯಾಹ್ನದವರೆಗೆ ಅಬ್ಬರಿಸಿದ ಮಳೆ ಬಳಿಕ ಕೊಂಚ ಬಿಡುವು ಪಡೆದಿದೆ. ಭಾರಿ ಗಾಳಿ ಮಳೆಯಿಂದಾಗಿ ಕೆಲವೆಡೆ ಮರಗಳು ಧರೆಗೆ ಉರುಳಿದ್ದು, ವಿದ್ಯುತ್ ಕಂಬಗಳು ಧರೆಗೆ ಉರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜುಲೈ 8 ಮತ್ತು 9 ರಂದು ಆರೆಂಜ್ ಅಲರ್ಟ್ ಇದ್ದು, ಹವಮಾನ ಇಲಾಖೆಯು ಜು.10, 11ರಂದು ಯೆಲ್ಲೋ ಅಲರ್ಟ್ ಘೋಷಿಸಿದೆ.

ಸಂತೆಯಲ್ಲಿ ಪರದಾಟ: ಮುಂಜಾನೆಯಿಂದ ಸುರಿಯುತ್ತಿದ್ದ ಭಾರಿ ಮಳೆಯಿಂದಾಗಿ ಕಾರವಾರ ನಗರದಲ್ಲಿನ ಭಾನುವಾರದ ಸಂತೆಯಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ವ್ಯಾಪಾರ ಹಾಗೂ ಖರೀದಿಗೆ ಪರದಾಡುವಂತಾಯಿತು. ಎಡಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ತರಕಾರಿ, ಹಣ್ಣು, ಸೊಪ್ಪುಗಳು ಮಳೆಯಲ್ಲಿ ತೋಯ್ದು ಗ್ರಾಹಕರಿಲ್ಲದೆ ತೊಂದರೆಯಾಯಿತು. ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ಏರುಮುಖದಲ್ಲಿ ಸಾಗಿದ್ದು, ಈರುಳ್ಳಿ ಕೆಜಿಗೆ 50 ರೂ., ಟೊಮೆಟೊ 70 ರೂ., ಆಲೂಗಡ್ಡೆ 40 ರೂ., ಬಿಟ್ರೂಟ್ 60 ರೂ. ಸೇರಿದಂತೆ ಬಹುತೇಕ ತರಕಾರಿಗಳನ್ನು 40ರಿಂದ 100ರೂ.ವರೆಗೂ ಮಾರಾಟ ಮಾಡುತ್ತಿರುವುದು ಕಂಡುಬಂತು.

ಅಂಕೋಲಾದಲ್ಲಿ ಅತ್ಯಧಿಕ ಮಳೆ:ಅಂಕೋಲಾದಲ್ಲಿ 83.4 ಮಿ.ಮೀ., ಭಟ್ಕಳದಲ್ಲಿ 60.8 ಹಳಿಯಾಳ 8.9 ಹೊನ್ನಾವರ 75.4, ಕಾರವಾರ 80.4, ಕುಮಟಾ 60.1, ಮುಂಡಗೋಡ 10.6, ಸಿದ್ದಾಪುರ 31.8, ಶಿರಸಿ 32.4, ಸೂಪಾ 70, ಯಲ್ಲಾಪುರ 39.2, ದಾಂಡೇಲಿ 16.1 ಮಿ.ಮೀ. ಮಳೆಯಾಗಿದೆ. ಒಟ್ಟಾರೆ, ಜಿಲ್ಲೆಯಲ್ಲಿ 50.5 ಮಿ.ಮೀ. ಮಳೆ ಸುರಿದಿದೆ.

ಜು.8ರಂದು ಕರಾವಳಿಯಲ್ಲಿ ಶಾಲೆ, ಪ.ಪೂ. ಕಾಲೇಜುಗಳಿಗೆ ರಜೆ ಮುಂದುವರಿಕೆ: ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ, ಶಾಲಾ ಮಕ್ಕಳ ಹಿತದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಮತ್ತು ಕಾರವಾರ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 8ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ.

ಇದನ್ನೂ ಓದಿ:ಗೋಕಾಕ್ ಫಾಲ್ಸ್​ ಬಳಿ ಪ್ರವಾಸಿಗರ ಹುಚ್ಚಾಟ: ನೀರು ಧುಮ್ಮಿಕ್ಕುವ ಸಮೀಪ ನಿಂತು ಸೆಲ್ಫಿಗೆ ಪೋಸ್​ - Gokak falls

ABOUT THE AUTHOR

...view details