ಬೆಂಗಳೂರು:ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿರುವ ನಡುವೆ ಪ್ರಸಕ್ತ ತಿಂಗಳು ಅಥವಾ ಏಪ್ರಿಲ್‌ನಲ್ಲಿಯೇ ಬಿಸಿಗಾಳಿ ಬೀಸುವ ಆಂತಕ ಎದುರಾಗಿದೆ. ಸಾಮಾನ್ಯವಾಗಿ ಬೇಸಿಗೆಗಾಲ ಮಾರ್ಚ್‌ನಿಂದ ಆರಂಭವಾಗಿ ಮೇ ತಿಂಗಳವರೆಗೆ ಇರುತ್ತದೆ. ಆದರೆ ಈ ಬಾರಿ ವಾಡಿಕೆಗಿಂತ ಮುನ್ನವೇ ಬೇಸಿಗೆ ಶುರುವಾಗಿದೆ. ಏಪ್ರಿಲ್‌ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್‌ನಲ್ಲಿಯೇ ಅಧಿಕವಾಗಿದೆ. ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲಿನ ಬೇಗೆ ಹೆಚ್ಚಾಗುತ್ತಿತ್ತು. ಆದರೆ ಫೆಬ್ರವರಿಯಲ್ಲೇ ಸುಡು ಬಿಸಿಲು ಕಾಣಿಸಿಕೊಂಡಿತ್ತು.
ಕರ್ನಾಟಕದ ಹೆಚ್ಚಿನ ಪ್ರದೇಶಗಳು ಶುಷ್ಕ ಮತ್ತು ಅರೆ ಶುಷ್ಕ ಸ್ಥಿತಿಯಲ್ಲಿ ಇರುವ ಕಾರಣ ಹೆಚ್ಚು ಬಿಸಿಲು ಕಾಣಿಸಿಕೊಂಡಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಉಷ್ಣಾಂಶ ಉಂಟಾಗುತ್ತಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಬೀಸಿಗಾಳಿ ಬೀಸುವ ಸಾಧ್ಯತೆ ಕಡಿಮೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ ಎರಡು ದಿನಗಳಲ್ಲಿ ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.