ಕರ್ನಾಟಕ

karnataka

ETV Bharat / state

14 ತಿಂಗಳ ಅತಿ ಕಿರಿಯ ಮಗುವಿಗೆ ಹೃದಯ ಕಸಿ ದೇಶದಲ್ಲೇ ಮೊದಲು; ನಾರಾಯಣ ಹೆಲ್ತ್ ಸಿಟಿ ವೈದ್ಯರ ಸಾಧನೆ - HEART TRANSPLANT

ನಾರಾಯಣ ಹೆಲ್ತ್ ಸಿಟಿ ವೈದ್ಯರ ತಂಡವು 14 ತಿಂಗಳ ಮಗುವಿಗೆ ಹೃದಯದ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಎರಡು ತಿಂಗಳ ಚಿಕಿತ್ಸೆಯ ಬಳಿಕ ಮಗುವನ್ನು ಡಿಶ್ಚಾರ್ಜ್​ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Heart transplant for baby  First surgery successful  Narayana Health City team  Bengaluru
ಸಾಂದರ್ಭಿಕ ಚಿತ್ರ (ETV Bharat)

By ETV Bharat Health Team

Published : Nov 21, 2024, 5:25 PM IST

ಬೆಂಗಳೂರು:14 ತಿಂಗಳ ಪುಟ್ಟ ಕಂದಮ್ಮನಿಗೆ ಯಶಸ್ವಿಯಾಗಿ ಹೃದಯ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ನಾರಾಯಣ ಹೆಲ್ತ್‌ಸಿಟಿಯ ವೈದ್ಯರ ತಂಡ ದಾಖಲೆ ನಿರ್ಮಿಸಿದೆ. ರಿಸ್ಟ್ರಿಕ್ಟಿವ್ ಕಾರ್ಡಿಯೋ ಮಯೋಪತಿ (ಆರ್‌ಸಿಎಂ) ಹೆಸರಿನ ಹೃದಯ ಸಂಬಂಧಿತ ಅಪರೂಪದ ಕಾಯಿಲೆ ಅಂತಿಮ ಹಂತ ತಲುಪಿದ್ದ ಪುಟಾಣಿಗೆ ನಾರಾಯಣ ಹೆಲ್ತ್‌ನ ವಿಶೇಷ ಪರಿಣಿತ ವೈದ್ಯರ ತಂಡದಿಂದ‌ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದು ದೇಶದಲ್ಲೇ ಅತಿ ಕಿರಿಯ ಮಗುವೊಂದರ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಎಂಬ ದಾಖಲೆಗೆ ಪಾತ್ರವಾಗಿದೆ.

ಈಗ ಹೊಸ ಹೃದಯ ಪಡೆದಿರುವ ಕಂದಮ್ಮನಿಗೆ 10 ತಿಂಗಳಿದ್ದಾಗ ಹೃದಯದ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಕಾಮಾಲೆ, ತೂಕನಷ್ಟ, ಕಿಬ್ಬೊಟ್ಟೆಯಲ್ಲಿ ದ್ರವ ಶೇಖರಣೆ (ಅಸೀಟಿಸ್) ಮತ್ತು ಬೇಕಾದಷ್ಟು ಆಹಾರ ತಿನ್ನಲಾಗದೆ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಮಗುವಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡತೊಡಗಿದಾಗ ಪೋಷಕರು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಗೆ ಕರೆತಂದಿದ್ದರು. ಪರಿಶೀಲನೆ ಹಾಗೂ ತಪಾಸಣೆ ನಡೆಸಿದ ಆಸ್ಪತ್ರೆಯ ಹೃದಯ ವೈಫಲ್ಯ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಮತ್ತು ಮಕ್ಕಳ ಹೃದಯ ಕಸಿ ಹಾಗೂ ಹಿರಿಯರಲ್ಲಿ ಹುಟ್ಟಿನಿಂದಲೇ ಬರುವ ಹೃದ್ರೋಗ ವಿಭಾಗದಲ್ಲಿ ವಿಶೇಷ ಪರಿಣಿತಿ ಹೊಂದಿರುವ ವೈದ್ಯ ಶಶಿರಾಜ್ ಮತ್ತು ತಜ್ಞರ ತಂಡ, 'ಮಗುವಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆಯೊಂದೇ ಏಕೈಕ ಆಯ್ಕೆಯಾಗಿದೆ' ಎಂದು ತೀರ್ಮಾನಿಸಿತ್ತು.

"ಮಕ್ಕಳಲ್ಲಿ ಹೃದಯ ವೈಫಲ್ಯವೆಂಬುದು ದೊಡ್ಡ ಸವಾಲು. ಬೇರೆ ಬೇರೆ ಸಮಸ್ಯೆಗಳಿಂದ ಹೃದಯ ದಾನವೂ ಸಹ ತೀರ ವಿರಳ. ವಿಶೇಷವಾಗಿ ಶಿಶುಗಳಿಗೆ ಹೃದಯವನ್ನೇ ಕಸಿ ಮಾಡುವ ಪರಿಸ್ಥಿತಿ ಬಂದಾಗ ಅದು ಸಂಕೀರ್ಣವಾದ ಹಾಗೂ ತುಂಬ ತೊಡಕಿನ ಪ್ರಕ್ರಿಯೆಯಾಗಿರುತ್ತದೆ. ಈ ಮಗುವಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಸಮಯ ಕೈ ಮೀರಿ ಹೋಗುತ್ತಿದೆ ಎಂಬುದೂ ಸಹ ನಮಗೆ ಸವಾಲಿನ ಕೆಲಸವಾಗಿತ್ತು'' ಎಂದು ಶಸ್ತ್ರಚಿಕಿತ್ಸೆಗೂ ಪೂರ್ವದ ಸನ್ನಿವೇಶವನ್ನು ಡಾ. ಶಶಿರಾಜ್ ವಿವರಿಸಿದರು.

ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ, 2 ತಿಂಗಳ ನಂತರ ಡಿಸ್ಚಾರ್ಜ್​:ಅಂತಿಮವಾಗಿ ಮಗುವಿಗೆ ಅಗತ್ಯವಿರುವ ಹೃದಯ 72 ಗಂಟೆಗಳ ಅವಧಿಯಲ್ಲಿ ಲಭ್ಯವಾಗಿತ್ತು. ನ್ಯೂರಾಲಾಜಿಕಲ್ ಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಸಾಧ್ಯವೇ ಇಲ್ಲ ಎನ್ನುವಂತಿತ್ತು. ಇದರಿಂದ ಎರಡೂವರೆ ವರ್ಷದ ಮಗುವೊಂದರ ಹೃದಯವನ್ನು ದಾನ ಮಾಡಲಾಗಿತ್ತು. ಹೃದಯ ಶಸ್ತ್ರಚಿಕಿತ್ಸಕ ಡಾ. ಸುದೇಶ್ ಪ್ರಭು, ಹಿರಿಯ ಶಸ್ತ್ರ ಚಿಕಿತ್ಸಕ ಮತ್ತು ಕಸಿ ತಜ್ಞ ಡಾ. ಟಿ. ಕುಮಾರನ್, ಅರವಳಿಕೆ ತಜ್ಞ ಡಾ. ಶ್ರೀಧರ್ ಜೋಶಿ, ತೀವ್ರ ನಿಗಾ ತಜ್ಞರಾದ ಡಾ. ರಿಯಾನ್‌ ಅವರನ್ನೊಳಗೊಂಡ ವೈದ್ಯಕೀಯ ತಂಡ ಆಗಸ್ಟ್ 18, 2024 ರಂದು ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು. ಆಸ್ಪತ್ರೆಯಲ್ಲಿ ಸುಮಾರು ಎರಡು ತಿಂಗಳ ಚೇತರಿಕೆಯ ನಂತರ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಈಗ ಮಗು ಲವಲವಿಕೆಯಿಂದಿದೆ ಹಾಗೂ ಆಹಾರ ಸೇವನೆ ಮತ್ತು ತೂಕ ವೃದ್ಧಿಯಲ್ಲಿ ಚೇತರಿಸಿಕೊಂಡಿದೆ ಎಂದು ವೈದ್ಯರು ಮಾಹಿತಿ ನೀಡಿದರು.

ವೈದ್ಯರ ಮಾತು:''ತಜ್ಞರ ತಂಡದ ಪ್ರಯತ್ನ ಹಾಗೂ ಫಲಿತಾಂಶದಿಂದ ನಾವು ಸಂತಸಗೊಂಡಿದ್ದು, ಈ ಪ್ರಕರಣವು ಹೃದಯ ವೈಫಲ್ಯ ಮತ್ತು ಅಂಗಾಂಗ ದಾನದ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ ಎಂದು ಭಾವಿಸುತ್ತೇವೆ'' ಎಂದು ಡಾ. ಶಶಿರಾಜ್ ತಿಳಿಸಿದರು.

''ಸಕಾಲದಲ್ಲಿ ವೈದ್ಯಕೀಯ ನೆರವು ಪಡೆದಿದ್ದು, ಚಿಕಿತ್ಸೆ ವಿಧಾನ ಮತ್ತು ಕೈಗೊಂಡ ತೀರ್ಮಾನ ಎಲ್ಲವೂ ಸಮಯೋಚಿತ ಮತ್ತು ಸಂಜೀವಿನಿಯಂತಿತ್ತು'' ಎಂದು ನಾರಾಯಣ ಹೆಲ್ತ್ ಸಿಟಿಯ ಸುಧಾರಿತ ಹೃದಯ ರೋಗಗಳ ಚಿಕಿತ್ಸೆಗಳ ವಿಭಾಗದ ನಿರ್ದೇಶಕ ಡಾ. ಜುಲಿಯಸ್ ಪುನ್ನೆನ್ ಹೇಳಿದರು.

ಖ್ಯಾತ ಹೃದಯ ಶಸ್ತ್ರಚಿಕಿತ್ಸಕ, ನಾರಾಯಣ ಹೆಲ್ತ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ದೇವಿಶೆಟ್ಟಿ ಅವರು ಮಾತನಾಡಿ, "ಇದು ನಮಗೆ ಬಹಳ ಹೆಮ್ಮೆಯ ಕ್ಷಣ. ವೈದ್ಯರು, ನರ್ಸ್, ಚಿಕಿತ್ಸಕರು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ನಾರಾಯಣ ಹೆಲ್ತ್‌ನ ತಂಡದಿಂದ ಈ ಮೈಲಿಗಲ್ಲು ಸಾಧಿಸಲು ಸಾಧ್ಯವಾಗಿದೆ. ಇದು ಉನ್ನತ ಶ್ರೇಣಿಯ ಆರೋಗ್ಯ ರಕ್ಷಣೆಯನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ'' ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳಿಗೆ ಸರ್ಕಾರದಿಂದಲೇ ತಜ್ಞ ವೈದ್ಯರಿಂದ 'ಉಚಿತ ಸೆಕೆಂಡ್ ಒಪಿನಿಯನ್'

ABOUT THE AUTHOR

...view details