ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 'ಹುಕ್ಕಾ' ಉತ್ಪನ್ನಗಳ ಮಾರಾಟ -ಸೇವನೆ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ

ರಾಜ್ಯದಲ್ಲಿ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ ನಿಷೇಧಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ಹುಕ್ಕಾ ನಿಷೇಧ
ಹುಕ್ಕಾ ನಿಷೇಧ

By ETV Bharat Karnataka Team

Published : Feb 8, 2024, 7:00 AM IST

Updated : Feb 8, 2024, 10:22 AM IST

ಬೆಂಗಳೂರು:ರಾಜ್ಯದಲ್ಲಿ ಎಲ್ಲ ರೀತಿಯ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ ಮಾಡುವುದು, ಅವುಗಳ ಪರ ಜಾಹೀರಾತು ನೀಡುವುದು, ಸೇವನೆಗೆ ಪ್ರಚೋದನೆ ಹಾಗೂ ಸಂಗ್ರಹಣೆ ಮಾಡುವುದನ್ನು ನಿಷೇಧಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ಸಾರ್ವಜನಿಕರ ಆರೋಗ್ಯ ಕಾಪಾಡುವುದಕ್ಕೆ ಸಂವಿಧಾನದ 47ನೇ ವಿಧಿಯಲ್ಲಿ ರಾಜ್ಯ ಸರ್ಕಾರಕ್ಕೆ ಲಭ್ಯವಿರುವ ಅಧಿಕಾರವನ್ನು ಬಳಸಿ, ತಂಬಾಕು ಅಥವಾ ನಿಕೋಟಿನ್​ ಒಳಗೊಂಡ ಹುಕ್ಕಾ, ತಂಬಾಕು ರಹಿತ ಮತ್ತು ನಿಕೋಟಿನ್​​ ರಹಿತ ಹುಕ್ಕಾ, ಸ್ವಾದಭರಿತ, ಮೊಲಾಸಿಸ್, ಶಿಶಾ ಒಳಗೊಂಡ ಹುಕ್ಕಾಗಳನ್ನು ನಿಷೇಧಿಸಿ ಈ ಆದೇಶ ಹೊರಡಿಸಲಾಗಿದೆ.

ಆರೋಗ್ಯ ಇಲಾಖೆ ಆದೇಶ ಪ್ರತಿ

ಈ ಆದೇಶ ಉಲ್ಲಂಘಿಸಿದವರ ವಿರುದ್ಧ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ (ಕೋಟ್ಟಾ) ಕಾಯ್ದೆ, ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ಕಾಯ್ದೆ, ಭಾರತೀಯ ದಂಡ ಸಂಹಿತೆ ಹಾಗೂ ಅಗ್ನಿ ನಿಯಂತ್ರಣ ಮತ್ತು ಸುರಕ್ಷತಾ ಕಾಯ್ದೆಗಳ ಅಡಿ ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲ. ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ಕಾಯ್ದೆ ಅಡಿ ನಿಕೋಟಿನನ್ನು ವಿಷ ಎಂದು ಪರಿಗಣಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಹುಕ್ಕಾವನ್ನು ವ್ಯಸನಕಾರಿ ಉತ್ಪನ್ನ ಎಂದು ಘೋಷಿಸಿದೆ. ಹುಕ್ಕಾ ಸೇವನೆಯು ಆರೋಗ್ಯಕ್ಕೆ ಅತ್ಯಂತ ಮಾರಕ. ಹುಕ್ಕಾ ಬಾರ್​ಗಳು ಅಗ್ನಿ ಅನಾಹುತಗಳಿಗೆ ಕಾರಣವಾಗುತ್ತಿದೆ. ಈ ಎಲ್ಲ ಕಾರಣದಿಂದ ಹುಕ್ಕಾ ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ನಡೆಸಿರುವ ಗ್ಲೋಬಲ್ ಅಡಲ್ಸ್ ಟೊಬ್ಯಾಕೊ ಸರ್ವೇ 2016-17 ಅಧಯನ ಪ್ರಕಾರ, ಕರ್ನಾಟಕದಲ್ಲಿ 22.8% ವಯಸ್ಕರು (15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಒಂದಲ್ಲ ಒಂದು ರೀತಿಯ ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಈ ಪೈಕಿ ಶೇ.8.8 ರಷ್ಟು ಮಂದಿ ಧೂಮಪಾನಿಗಳಾಗಿದ್ದಾರೆ. ಕರ್ನಾಟಕದಲ್ಲಿ 23.9% ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ಪರೋಕ್ಷ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ

ಭಾರತದಲ್ಲಿ ತಂಬಾಕು ಉತ್ಪನ್ನಗಳ ಸೇವನೆ, ಮಾರಾಟ, ಜಾಹೀರಾತು, ಸಂಗ್ರಹಣೆ, ವಾಣಿಜ್ಯ ಮಹಾರ, ಉತ್ಪಾದನೆ ಹಂಚಿಕೆ ಇವುಗಳನ್ನು ಸಿಗರೇಟ್ ಅಂಡ್ ಟೊಬ್ಯಾಕೋ ಪ್ರಾಡಕ್ಟ್ ಆಕ್ಟ್ (COTPA) 2003 ರಲ್ಲಿ ನಿಯಂತ್ರಿಸಲಾಗಿದೆ. ಅಧ್ಯಯನಗಳ ಪ್ರಕಾರ, 45 ನಿಮಿಷಗಳ ಹುಕ್ಕಾ ಸೇವನೆ, 100 ಸಿಗರೇಟ್ ಸೇದುವುದಕ್ಕೆ ಸಮನಾಗಿರುತ್ತದೆ ಹಾಗೂ ಆರೋಗ್ಯಕ್ಕೆ ಮಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿದೆ ಎಂದು ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ:ಕರ್ನಾಟಕ ಹೈಕೋರ್ಟ್ ಸಿಜೆ ಆಗಿ ಎನ್.ವಿ.ಅಂಜಾರಿಯಾ ನೇಮಕಕ್ಕೆ ಕೊಲಿಜಿಯಂ ಶಿಫಾರಸು

Last Updated : Feb 8, 2024, 10:22 AM IST

ABOUT THE AUTHOR

...view details