ಬೆಂಗಳೂರು: ಲೈಂಗಿಕ ಕಿರುಕುಳ ಆರೋಪ ಕುರಿತು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಹಿಂಪಡೆದಿದ್ದಾರೆ.
ಪ್ರಕರಣದಲ್ಲಿ ತಮ್ಮನ್ನು ಬಂಧಿಸಬಹುದು ಎಂಬ ಭೀತಿಯಲ್ಲಿದ್ದ ರೇವಣ್ಣ ಗುರುವಾರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ನಗರದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ವಿಶೇಷ ತನಿಖಾ ದಳದ ಪರ ವಾದ ಮಂಡಿಸಿದ್ದ ಎಸ್‌ಪಿಸಿ ಬಿ.ಎನ್.ಜಗದೀಶ್ ಅವರು, ವಿಚಾರಣೆಗೆ ಹಾಜರಾಗುವಂತೆ ರೇವಣ್ಣ ಅವರಿಗೆ ನೋಟಿಸ್ ನೀಡಲಾಗಿದೆ. ಈ ನೋಟಿಸ್ನಲ್ಲಿ ತಮ್ಮ (ರೇವಣ್ಣ) ವಿರುದ್ಧ ದಾಖಲಾಗಿರುವ ಎಲ್ಲ ಆರೋಪಗಳು ಜಾಮೀನು ರಹಿತವಲ್ಲದ್ದಾಗಿದೆ. ಅಲ್ಲದೆ, ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಸೇರ್ಪಡೆಯಾಗಿಲ್ಲ. ಹೀಗಾಗಿ ಅರ್ಜಿದಾರರನ್ನು ಬಂಧಿಸುವ ಅಗತ್ಯ ಎದುರಾಗುವುದಿಲ್ಲ. ಆದ್ದರಿಂದ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವ ಅಗತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಈ ನಡುವೆ ರೇವಣ್ಣ ಪರ ವಕೀಲರು, ಅರ್ಜಿ ಹಿಂಪಡೆಯುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ಅರ್ಜಿಯನ್ನು ಹಿಂಪಡೆದರು.
ಬಂಧನ ಭೀತಿಯಿಂದ ಸದ್ಯ ನಿರಾಳ: ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾದ ಬಳಿಕ ವಿಶೇಷ ತನಿಖಾ ದಳ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ವಿಚಾರಣೆಗೆ ಹಾಜರಾದಲ್ಲಿ ತಮ್ಮನ್ನು ಬಂಧಿಸಬಹುದು ಎಂಬ ಭೀತಿಯುಂಟಾಗಿತ್ತು. ಇದರಿಂದ ಗುರುವಾರ ತಮ್ಮನ್ನು ಎಸ್‌ಐಟಿ ಬಂಧಿಸಲಿದ್ದು, ಹೀಗಾಗಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿದ್ದರು. ಆದರೆ, ಎಸ್‌ಐಟಿ ಪರ ವಕೀಲರು, ಅರ್ಜಿದಾರರನ್ನು ಬಂಧಿಸುವಂತ ಆರೋಪಗಳಲ್ಲಿ ಪ್ರಕರಣ ದಾಖಲಿಸಿಲ್ಲ ಎಂಬುದಾಗಿ ಹೇಳಿಕೆ ನೀಡಿದ ಪರಿಣಾಮ ಬಂಧನ ಭೀತಿಯಿಂದ ರೇವಣ್ಣ ಪಾರಾಗಿದ್ದಾರೆ.