ಬೆಂಗಳೂರು :ಹೆಚ್.ಡಿದೇವೇಗೌಡರನ್ನು ಪ್ರಧಾನಿ ಮಂತ್ರಿ ಮಾಡಿದವರು ನಾವೇ ಅಂತ ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಹಾಗೆಯೇ ಅವರನ್ನು ಅಧಿಕಾರದಿಂದ ಕೆಳಗಿಳಿಸಿದವರು ಕೂಡ ಕಾಂಗ್ರೆಸ್ನವರು. ಯಾವುದೇ ಆಪಾದನೆ ಇಲ್ಲದೇ ಇದ್ದರೂ ಕೂಡ ಅವರನ್ನು ಅಧಿಕಾರದಿಂದ ತೆಗೆಯಲಾಯಿತು ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ತಿರುಗೇಟು ನೀಡಿದರು.
ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿವಾಸ ಧವಳಗಿರಿಗೆ ಹೆಚ್.ಡಿ ರೇವಣ್ಣ ಮತ್ತು ತಮ್ಮ ಮಗ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿದರು. ಪ್ರಜ್ವಲ್ ಮತ್ತೆ ಸ್ಪರ್ಧೆ ಮಾಡಲಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಮಿತ್ರಪಕ್ಷದ ಸಹಕಾರ ಕೋರಿದರು. ನಂತರ ಚುನಾವಣೆ ಎದುರಿಸುವ ಮತ್ತು ಪರಸ್ಪರ ಸಹಕಾರ ನೀಡುವ ಕುರಿತು ಯಡಿಯೂರಪ್ಪ, ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರ ಜೊತೆ ಚರ್ಚಿಸಿದರು.
ಬಿಎಸ್ವೈ ಭೇಟಿ ಬಳಿಕ ಮಾತನಾಡಿದ ಹೆಚ್.ಡಿ ರೇವಣ್ಣ, ಇವತ್ತು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇವೆ. ವಿಜೇಯೇಂದ್ರ ಅವರನ್ನು ಕೂಡ ಭೇಟಿ ಮಾಡಿ ಮಾತುಕತೆ ಮಾಡಿದ್ದೇವೆ. ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡೋದು ಮಾತ್ರ ನಮ್ಮ ಉದ್ದೇಶ. ಮೋದಿ ಅವರು ದೊಡ್ಡಣ್ಣ ಅನ್ನುವಂತಹ ಸ್ಥಿತಿಯಲ್ಲಿ ಈಗ ಇದ್ದಾರೆ. ಯಡಿಯೂರಪ್ಪಗೆ ರಾಜ್ಯದಲ್ಲಿ ಅವರದೇ ಆದ ಒಂದು ಶಕ್ತಿ ಇದೆ. ಇವತ್ತು ಯಡಿಯೂರಪ್ಪ ಅವರ ಆಶೀರ್ವಾದ ಪಡೆದಿದ್ದೇವೆ. ಪ್ರಜ್ವಲ್ ರೇವಣ್ಣ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಗೆಲ್ಲೋದಕ್ಕೆ ಒಟ್ಟಾಗಿ ಕೆಲಸ ಮಾಡುವ ಭರವಸೆ ಕೊಟ್ಟಿದ್ದಾರೆ ಎಂದರು.
28 ಕ್ಕೆ 28 ಸ್ಥಾನವನ್ನು ಗೆಲ್ಲಬೇಕಾಗಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು 25 ರಂದು ವಾಪಸ್ ಆಗುತ್ತಾರೆ. ಏನಾದರೂ ವ್ಯತ್ಯಾಸ ಇದ್ದರೆ ಪರಿಹಾರ ಮಾಡಿಕೊಳ್ಳುತ್ತೇವೆ. ಮಾಜಿ ಶಾಸಕ ಪ್ರೀತಮ್ ಗೌಡ ಅವರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇವೆ. ಅವರು ಸಮಸ್ಯೆಗೆ ಪರಿಹಾರ ಕಂಡು ಕೊಳ್ತಾರೆ ಎಂದು ಹೇಳಿದರು.