ಬೆಂಗಳೂರು: ಇದು ಡಿಪಿಆರ್ ಬಜೆಟ್. ಸರಕಾರದಿಂದ ಯವುದಾದರೂ ಯೋಜನೆ ಜಾರಿ ಮಾಡುವ ಮುನ್ನ ಸಮಗ್ರ ಯೋಜನಾ ವರದಿ (DPR) ಅಂತ ಮಾಡುತ್ತಾರೆ. ಆ DPR ಆದ ಮೇಲೆ ಏನೆಲ್ಲಾ ಆಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಬಜೆಟ್ ಕೂಡ ಹಾಗೆಯೇ ಇದೆ ಎಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಬಜೆಟ್ ನಂತರ ಇಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ ನೋಡಿದರೆ ಇದು ನಾಳೆ ಬಾ ಸರಕಾರದಂತಿದೆ. ಬಜೆಟ್ ಓದುವಾಗಲೇ ಅವರಲ್ಲಿ ವಿಶ್ವಾಸದ ಕೊರತೆ ಎದ್ದು ಕಾಣುತ್ತಿತ್ತು. ಅವರು ಗ್ಯಾರಂಟಿ ಗುಂಗಿನಿಂದ ಇನ್ನೂ ಹೊರಬಂದಿಲ್ಲ. 10 ತಿಂಗಳು ಕಳೆದರೂ ಇನ್ನೂ ಗ್ಯಾರಂಟಿಗಳ ಬಗ್ಗೆಯೇ ಕನವರಿಕೆ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಸಿದ್ದರಾಮಯ್ಯರ 15ನೇ ಬಜೆಟ್ ಇದು. ರಾಜ್ಯದ ಇತಿಹಾಸದಲ್ಲಿ 15 ಬಜೆಟ್ಗಳನ್ನು ಮಂಡಿಸುವವರು ಮುಂದೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಆಡಳಿತದಲ್ಲಿ ಸಾಕಷ್ಟು ಅನುಭವ ಇದೆ. ಆದರೆ, ಬಜೆಟ್ ನೋಡಿದರೆ ಯಾವುದೇ ರೀತಿಯ ವಿಶ್ವಾಸ ಮೂಡುತ್ತಿಲ್ಲ ಎಂದರು.
ಬಜೆಟ್ ಮೂಲಕ ರಾಜ್ಯದ ವಿನಾಶಕ್ಕೆ ಬುನಾದಿ:ಸರಕಾರದ ಖಜಾನೆ ಖಾಲಿ ಆಗಿದೆ ಅಂತ ನಾವು ಹೇಳಲ್ಲ. ಜನರು ಸಮೃದ್ದಿಯಾಗಿ ಖಜಾನೆ ತುಂಬಿಸಿದ್ದಾರೆ. ಈ ಬಜೆಟ್ ನೋಡಿದರೆ ಜನರು ನಾವು ಎಷ್ಟು ತಪ್ಪು ಮಾಡಿದ್ದೇವೆ ಇವರನ್ನು ಗೆಲ್ಲಿಸಿ ಎಂದು ಜನ ಅಂದುಕೊಂಡಿದ್ದಾರೆ. ಕೇಂದ್ರ ಸರಕಾರ ಅಮೃತಕಾಲ ಅಂದರೆ ಸಿದ್ದರಾಮಯ್ಯ ಅವರು ವಿನಾಶಕಾಲ ಎಂದು ಹೇಳಿದರು. ಇವತ್ತಿನ ಸಿಎಂ ಬಜೆಟ್ ರಾಜ್ಯದ ವಿನಾಶಕಾಲಕ್ಕೆ ಬುನಾದಿ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರಕ್ಕೆ ಅವರು ನಿತ್ಯವೂ ಬೈತಾರೆ. ಆದರೆ ಅದೇ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಅನ್ನುತ್ತಾರೆ. ಬಜೆಟ್ ಪುಸ್ತಕದ ಪ್ರತಿ ಪುಟದಲ್ಲಿಯೂ ಕೇಂದ್ರ ಸರಕಾರವನ್ನು ಬೈದಿದ್ದಾರೆ. ಒಂದು ಸುಳ್ಳನ್ನು ಸತ್ಯ ಮಾಡಬೇಕಾದರೆ ನೂರು ಬಾರಿ ಸುಳ್ಳು ಹೇಳು ಎನ್ನುವ ಮಾತಿದೆ. ಅದೇ ಕೆಲಸವನ್ನು ಈಗ ಸಿದ್ದರಾಮಯ್ಯ ಮಾಡಿದ್ದಾರೆ. ಇಂಥ ಕೆಟ್ಟ ಸರಕಾರ ಈ ದೇಶದಲ್ಲಿ ಯಾವತ್ತೂ ಬಂದಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ನಾಡಿನ ಜನರ ಮೇಲೆ ಸಿದ್ದರಾಮಯ್ಯಗೆ ಆಕ್ರೋಶ ಇದ್ದಂತೆ ಇದೆ. ಆ ಸಿಟ್ಟನ್ನು ಬಜೆಟ್‌ನಲ್ಲಿ ತೋರಿಸಿದ್ದಾರೆ. ಇಷ್ಟೇ ಈ ಬಜೆಟ್‌ನ ಸಾರಾಂಶ. ಅಷ್ಟೇ ಅಲ್ಲದೆ, ಸಿದ್ದರಾಮಯ್ಯಗೆ ಜೆಡಿಎಸ್, ಬಿಜೆಪಿ, ಕೇಂದ್ರದ ಮೇಲೆ ಇಷ್ಟು ದಿನ ಆಕ್ರೋಶ ಇತ್ತು ಅಂತ ಅಂದುಕೊಂಡಿದ್ದೆ. ಆದರೆ ಈ ಬಜೆಟ್ ನೋಡಿದರೆ ಸಿದ್ದರಾಮಯ್ಯ ಅವರಿಗೆ 7 ಕೋಟಿ ಕನ್ನಡಿಗರ ಮೇಲೂ ಆಕ್ರೋಶ ಇದೆ ಅಂತ ಅರ್ಥವಾಗುತ್ತದೆ ಎಂದು ಆರೋಪಿಸಿದರು.
ಇದನ್ನೂಓದಿ:ಮಹಿಳಾ ಅಭ್ಯುದಯಕ್ಕೆ ಪೂರಕ ಬಜೆಟ್: ಎಫ್‌ಕೆಸಿಸಿಐ ಉಪಾಧ್ಯಕ್ಷೆ ಉಮಾ ರೆಡ್ಡಿ