ಮಂಡ್ಯ: ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲಾಕ್ ತುಂಡಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರ ಎಲ್ಲಾ ಜಲಾಶಯಗಳ ಕ್ರಸ್ಟ್ ಗೇಟ್ಗಳ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರದಲ್ಲಿ ಭತ್ತ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಅವರು ಮಾಧ್ಯಮಗಳ ಜತೆ ಮಾತನಾಡಿದರು. ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಲಾಕ್ ಕಟ್ ವಿಚಾರ ಅತ್ಯಂತ ಕಳವಳಕಾರಿ. ಇದು ದೊಡ್ಡ ಅನಾಹುತ. 19ನೇ ಕ್ರಸ್ಟ್ ಗೇಟ್ ತೆರೆದುಕೊಂಡು ಭಾರೀ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಇದರಿಂದ ಜಲಾಶಯದ 60 ಟಿಎಂಸಿ ನೀರು ಖಾಲಿಯಾಗುತ್ತದೆ. ಒಳ್ಳೆಯ ಮಳೆಯಾಗಿ ಜಲಾಶಯ ತುಂಬಿತ್ತು. ಈ ನೀರನ್ನೇ ನಂಬಿಕೊಂಡಿದ್ದ ರೈತರಿಗೆ ತೊಂದರೆ ಆಗಿದೆ ಎಂದು ಹೆಚ್ಡಿಕೆ ಆತಂಕ ವ್ಯಕ್ತಪಡಿಸಿದರು.
70 ವರ್ಷಗಳ ಹಿಂದೆಯೇ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಹಿಂದೆಯೂ ಅಲ್ಲಿ ಅನೇಕ ಸಮಸ್ಯೆಗಳು ಬೆಳಕಿಗೆ ಬಂದಿದ್ದವು. ನಾರಾಯಣಪುರ, ಆಲಮಟ್ಟಿ ಅಣೆಕಟ್ಟುಗಳಲ್ಲಿ ಸ್ಟಾಪ್ ಲಾಕ್ ಗೇಟ್ ಅಳವಡಿಸಲಾಗಿದೆ. ತುಂಗಭದ್ರಾ ಅಣೆಕಟ್ಟೆಯಲ್ಲಿ ಸ್ಟಾಪ್ ಲಾಕ್ ಗೇಟ್ ಅಳವಡಿಕೆ ಮಾಡಿಲ್ಲ. ಅದಕ್ಕಾಗಿ ನೀರು ನಿಲ್ಲಿಸಲು ಸಾಧ್ಯವಾಗಿಲ್ಲ. ಇದು ರೈತರ ವಿಚಾರದಲ್ಲಿ ಚೆಲ್ಲಾಟವಾಡಿದ ಹಾಗೆಯೇ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.