ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಮತ್ತೆ ಬಿಜೆಪಿ - ಜೆಡಿಎಸ್ ಸಮ್ಮಿಶ್ರ ಸರ್ಕಾರ ತರಲು ಈ ಮೈತ್ರಿ ವೇದಿಕೆಯಾಗಬೇಕು: ಹೆಚ್​ಡಿಕೆ ಕರೆ - JDS and BJP meeting

ರಾಜ್ಯದಲ್ಲಿ ಮತ್ತೆ ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ತರಲು ಈ ಮೈತ್ರಿ ವೇದಿಕೆಯಾಗಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ ಕರೆ ನೀಡಿದರು.

HD KUMARASWAMY REACTION  BENGALURU  FARMER CM HD KUMARASWAMY
ಹೆಚ್.ಡಿ ಕುಮಾರಸ್ವಾಮಿ

By ETV Bharat Karnataka Team

Published : Mar 29, 2024, 2:47 PM IST

Updated : Mar 29, 2024, 3:51 PM IST

ಬೆಂಗಳೂರು:ರಾಜ್ಯದಲ್ಲಿನ ಬಿಜೆಪಿ ಜೆಡಿಎಸ್ ಪಕ್ಷಗಳ ಮೈತ್ರಿ ಕೃತಕವಾಗಿ ಸೃಷ್ಟಿಯಾಗಿಲ್ಲ, ಇದೊಂದು ಸ್ವಾಭಾವಿಕ ಮೈತ್ರಿ. ಹಿಂದಿನ ಮೈತ್ರಿ ಸರ್ಕಾರದಲ್ಲಿ ಯಡಿಯೂರಪ್ಪ ಸಹಕಾರ ಕೊಟ್ಟಿದ್ದಕ್ಕೆ ಹಲವು ಒಳ್ಳೆಯ ಕೆಲಸ ಆಗಿದೆ. ಅದೇ ಮಾದರಿಯ ಸರ್ಕಾರ ಮತ್ತೆ ತರಬೇಕು. ಇದಕ್ಕೆ ಈ ಮೈತ್ರಿ ವೇದಿಕೆ ಆಗಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಗೆ ಚಾಲನೆ ನೀಡಿದ ನಾಯಕರು

ನಗರದ ಅರಮನೆ ರಸ್ತೆಯಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಯಿತು. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್, ವಿಪಕ್ಷ ನಾಯಕ ಆರ್ ಅಶೋಕ್, ಅಭ್ಯರ್ಥಿ ಗೋವಿಂದ ಕಾರಜೋಳ, ಜೆಡಿಎಸ್‌ ಸಮನ್ವಯ ಸಮಿತಿ ಅಧ್ಯಕ್ಷ ಜಿಟಿ ದೇವೇಗೌಡ ಸೇರಿ ಎರಡೂ ಪಕ್ಷದ ನಾಯಕರು ಉಪಸ್ಥಿತರಿದ್ದರು. ವಂದೇ ಮಾತರಂ ಗೀತೆಯೊಂದಿಗೆ ಸಭೆಯನ್ನು ಆರಂಭಿಸಲಾಯಿತು.

ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಉಭಯ ಪಕ್ಷದ ನಾಯಕರು

ಸಮನ್ವಯ ಸಭೆಯಲ್ಲಿ ಭಾಷಣ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ, 2006 ರಲ್ಲಿ ಬಿಎಸ್‌ ಯಡಿಯೂರಪ್ಪ ಜೊತೆ ಸರ್ಕಾರ ಮಾಡಿದ್ದಾಗ ಒಳ್ಳೆಯ ಆಡಳಿತ ಕೊಟ್ಟಿದ್ದೆವು. ಕೆಲವು ಪರಿಸ್ಥಿತಿಗಳಲ್ಲಿ ಮೈತ್ರಿ ಮುಂದುವರೆಯಲು ಸಾಧ್ಯವಾಗಲಿಲ್ಲ. ಆಗ ನಮ್ಮ ತಂದೆಯವರಿಗೆ ಕೆಲವರು ತಪ್ಪು ಮಾಹಿತಿ ನೀಡಿದ್ದರು, ದೇವೇಗೌಡರ ನಿರ್ಧಾರದಿಂದ ಅವತ್ತಿನ ರಾಜಕೀಯ ಸನ್ನಿವೇಶ ನಡೆದಿತ್ತು. ತಾತ್ಕಾಲಿಕವಾಗಿ ಸರ್ಕಾರ ಮಾಡ್ಬಾರ್ದು ಎಂಬ ಅಭಿಪ್ರಾಯ ಇತ್ತು. ಹೀಗಾಗಿ ಅಂದು ನಾವು ಆ ತೀರ್ಮಾನ ತೆಗೆದುಕೊಂಡಿದ್ದೇವೆ. 2018ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಆಗಬೇಕಿತ್ತು ಅನ್ಸುತ್ತೆ. ಹಾಗಾಗಿದ್ದಲ್ಲಿ ಭವಿಷ್ಯ ಇವತ್ತು ನಮ್ಮ( bjp-jds) ಸರ್ಕಾರವೇ ಇರ್ತಿತ್ತು. ವಿಧಿಯಾಟ ಆ ದಿನ ಏನೋ ನಡೆದು ಹೋಗಿದೆ. ನಮ್ಮಲ್ಲಿದ್ದ ಒಡಕುಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಯ್ತು ಎಂದರು.

ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ದೃಶ್ಯ

ಮೋದಿ ಅವರು ದೇಶದ ಭದ್ರತೆಗೆ ಸದಾಕಾಲ ದುಡಿಯುವುದನ್ನು ನೋಡಿದ್ದೇವೆ. ಅಮಿತ್ ಶಾ ಅವರ ಮಧ್ಯಸ್ಥಿಕೆಯಿಂದ ಈ ಮೈತ್ರಿಯಾಗಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಒಡಕು ಬಂದಿರಬಹುದು, ಅದರಿಂದಾಗಿ ನಾವು ನಿರಾಸೆಗೆ ಒಳಗಾದರೆ ಪಕ್ಷಕ್ಕೆ ಹಿನ್ನಡೆ ಅಗುತ್ತದೆ. ಕೆಲವೊಂದು ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯ ಇವೆ. ಅದನ್ನು ಸರಿಪಡಿಸಿಕೊಳ್ಳಬೇಕು. ಸಣ್ಣಪುಟ್ಟ ಸಮಸ್ಯೆ ಇದ್ದರೆ ಅದನ್ನು ದೂರ ಇಡಬೇಕು. ಉತ್ತರ ಕರ್ನಾಟಕ ಇರಬಹುದು ದಕ್ಷಿಣ ಕರ್ನಾಟಕ‌ ಇರಬಹುದು. ಏನಾದರೂ ಭಿನ್ನಾಭಿಪ್ರಾಯ ಇದ್ದರೂ ಪ್ರಾಮಾಣಿಕವಾಗಿ ಕೆಲಸ ಮಾಡಿ. ನಾನೇ ಹೆಚ್ಚು ಎಂಬ ಪ್ರತಿಷ್ಠೆ ಇದ್ದರೆ ಅದನ್ನು ಬಿಡಬೇಕು. ಪರಸ್ಪರ ಮಾತಾಡಿಕೊಂಡು ಕೆಲಸ ಮಾಡಬೇಕು. ಮೋದಿಯವರ ಕೈ ಶಕ್ತಿ ತುಂಬಬೇಕಿದೆ ಎಂದು ಕರೆ ನೀಡಿದರು.

ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಉಭಯ ಪಕ್ಷದ ಕಾರ್ಯಕರ್ತರು

ಸೂರ್ಯ ಚಂದ್ರ ಹುಟ್ಟುವುದು ಎಷ್ಟೇ ಸತ್ಯವೋ ಮೂರನೇ ಬಾರಿ ಕೇಂದ್ರದಲ್ಲಿ ಎನ್​​ಡಿಎ ಸರ್ಕಾರ ರಚನೆ‌ ಮಾಡುವುದು ಅಷ್ಟೇ ಸತ್ಯ. ಬೂತ್ ಮಟ್ಟ, ಜಿಲ್ಲಾ ಮಟ್ಟದಲ್ಲಿ ಪರಸ್ಪರ ಸಂಶಯಕ್ಕೆ ಒಳಗಾಗದೇ ಕೆಲಸ ಮಾಡಬೇಕು. ಮೈತ್ರಿ ನಾಯಕರು ಭದ್ರ ಬುನಾದಿ ಹಾಕಿದರೆ ಕಾಂಗ್ರೆಸ್ ಬರಲು ಸಾಧ್ಯವಿಲ್ಲ. ಆವತ್ತೇ ಕಾಂಗ್ರೆಸ್‌ಗೆ ಮೈತ್ರಿ ಬಗ್ಗೆ ಭಯ ಶುರುವಾಗಿದೆ. ಇದು ತಾತ್ಕಾಲಿಕ ಮೈತ್ರಿ ಅಲ್ಲ. ಇನ್ನೂ ಮುಂದೆ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಇದು ರಾಜ್ಯದ ಅಭಿವೃದ್ಧಿ ಮೈತ್ರಿಯಾಗಿದೆ. ಹಿಂದೆಯೂ ಬಿಜೆಪಿ ಜೆಡಿಎಸ್ ಮಧ್ಯೆ ಹೊಂದಾಣಿಕೆ ಆಗಿತ್ತು. ಆದರೆ ಕೆಲ ಸೈದ್ಧಾಂತಿಕ ಕಾರಣಗಳು ಹಾಗೂ ದೇವೇಗೌಡರ ಸಮ್ಮತಿ ಆಗ ಇರಲಿಲ್ಲ. ಇವತ್ತು ದೇವೇಗೌಡರು ಮೋದಿಯವರ ಜತೆಗೆ ಈ ಸಮ್ಮಿಲನಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದರು.

ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಉಭಯ ಪಕ್ಷದ ಕಾರ್ಯಕರ್ತರು

ಈ ಸರ್ಕಾರ ಪುಟ ಗಟ್ಟಲೆ ಜಾಹೀರಾತು ಕೊಡುತ್ತಿದೆ ಯಾರ ಹಣ ಇದು?, ಜನರ ತೆರಿಗೆ ಹಣ ದುರ್ಬಳಕೆ ಆಗ್ತಿದೆ. ಇದನ್ನ ಜನರಿಗೆ ತಿಳಿಸಬೇಕಿದೆ. ಈ ಸರ್ಕಾರ ಜಾಹೀರಾತಿಗೆ 200 ಕೋಟಿ ರೂ ಬಜೆಟ್​ನಲ್ಲಿ ಹೆಚ್ಚುವರಿ ಪಡೆದುಕೊಂಡಿದೆ. ಸರ್ಕಾರ ರೈತರಿಗೆ ಕೇವಲ 2 ಸಾವಿರ ಘೋಷಣೆ ಮಾಡಿದೆ. ಜಾಹೀರಾತಿಗೆ ಬೇಕಾಬಿಟ್ಟಿ ಖರ್ಚು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ನನ್ನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕನಿಷ್ಟ 25 ಸಾವಿರ ಮತಗಳ ಲೀಡ್ ಕೊಡಿಸುತ್ತೇನೆ. ಬೆಂಗಳೂರು ಗ್ರಾಮಾಂತರ ಅಭ್ಯರ್ಥಿಗೆ ಕನಿಷ್ಟ 25 ಸಾವಿರ ಲೀಡ್ ಬರುತ್ತದೆ ಎಂದರು.

ಇದಕ್ಕೂ ಮುನ್ನ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ‌, ದೇಶದ ಭವಿಷ್ಯ ರೂಪಿಸುವ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಂದೇ ವೇದಿಕೆಗೆ ಬಂದಿದ್ದೇವೆ. 2006ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಆಗಿತ್ತು. ಅಂದು ದೇವೇಗೌಡರ ಸಮ್ಮತಿ ಇರಲಿಲ್ಲ. 2024ರ ಚುನಾವಣೆ ಸಂದರ್ಭದಲ್ಲಿ ಒಂದೇ ವೇದಿಕೆಯಲ್ಲಿ ಸೇರಿದ್ದೇವೆ. ಯಡಿಯೂರಪ್ಪ ಜೊತೆ ಜೊತೆಗೆ ದೇವೇಗೌಡರು ಆಶೀರ್ವಾದ ಮಾಡಿದ್ದಾರೆ‌. ಮುತ್ಸದ್ದಿ ರಾಜಕಾರಣಿ ದೇವೇಗೌಡರು ದೇಶದ ಅಭಿವೃದ್ಧಿ ದೃಷ್ಟಿಯಿಂದ, ಭದ್ರತೆ ದೃಷ್ಟಿಯಿಂದ, ಕೇಂದ್ರದಲ್ಲಿ ಮೋದಿ ಅವರು ಮತ್ತೊಮ್ಮೆ‌ ಪ್ರಧಾನಿ ಆಗಬೇಕು ಅಂತ‌ ಆಶಯ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಜೊತೆಗಿನ ಮೈತ್ರಿ ಬಿಜೆಪಿಗೆ ಆನೆ ಬಲ ಬಂದಂತೆ ಆಗಿದೆ ಎಂದರು.

ಬಹಳಷ್ಟು ಸಲ ಹೊಂದಾಣಿಕೆ ರಾಜಕೀಯ ನಡೆದಿದೆ. ಬಿಜೆಪಿ ಜೆಡಿಎಸ್ ‌ಹಾಗೂ ಜೆಡಿಎಸ್ ಕಾಂಗ್ರೆಸ್ ಸಾಕಷ್ಟು ಸಲ ಹೊಂದಾಣಿಕೆ ಆಗಿದೆ. ಆದರೆ ಈ ಸಂದರ್ಭದಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆಗೆ ಜನರ ಆಶೀರ್ವಾದ ಸಿಕ್ಕಂತೆ ಆಗಿದೆ. ಈ ಸಮ್ಮಿಲನ ರಾಜ್ಯದ ಜನರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪ್ರತಿಯೊಬ್ಬರೂ ಬಹಳ ವಿಶ್ವಾಸದಿಂದ ಕೆಲಸ ಮಾಡಬೇಕು. ಬಿಜೆಪಿ ಜೆಡಿಎಸ್‌ ಸಮ್ಮಿಲನ ರಾಜ್ಯ ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವಂತಾಗಲಿದೆ ಎಂದರು.

ನಿನ್ನೆ ಮೈಸೂರು, ಮಂಡ್ಯದಲ್ಲಿ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿದೆ. ಎರಡೂ ಪಕ್ಷದ ಮುಖಂಡರಿಗೆ ಜವಾಬ್ದಾರಿ ಹೆಚ್ಚಿದೆ. ಇದನ್ನ ರಾಜ್ಯದ ಜನ ಗಂಭೀರವಾಗಿ ಪರಿಗಣಿಸಿದ್ದಾರೆ. ಒಟ್ಟಾಗಿ ದುಡಿಯುವ ವಾತಾವರಣ ಸೃಷ್ಟಿಯಾಗಿದೆ. ಇದರ ಪರಿಣಾಮವಾಗಿ ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ದುಡಿಯಬೇಕು. ಕುಮಾರಸ್ವಾಮಿ ಅವರು, ಕೇಂದ್ರದಲ್ಲಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ತಮ್ಮ ಆರೋಗ್ಯ ಕಡೆಗಣಿಸಿ ವಿಶ್ರಾಂತಿ ಪಡೆಯದೇ ನಮ್ಮ ಜೊತೆ ಓಡಾಡುತ್ತಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಮೂರೇ ದಿನದಲ್ಲಿ ಪ್ರವಾಸ ಆರಂಭಿಸಿದ್ದಾರೆ. ಇದು ಅವರ ಬದ್ದತೆ ತೋರಿಸುತ್ತಿದೆ ಎಂದರು.

ಸಿಎಂ ಸಿದ್ದರಾಮಯ್ಯ ಕನಿಷ್ಠ 15 - 20 ಸಚಿವರನ್ನ ಅಭ್ಯರ್ಥಿ ಮಾಡಬೇಕು ಅಂತ ತೀರ್ಮಾನಿಸಿದ್ದರು. ಆದರೆ, ಮೋದಿ ಅವರ ಆಡಳಿತ ವೈಖರಿಗೆ ಹೆದರಿ ಒಬ್ಬ ಸಚಿವರೂ ಚುನಾವಣೆಗೆ ಸ್ಪರ್ಧೆ ಮಾಡಲು ತಯಾರಾಗಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ ಕಳೆದ ಒಂಬತ್ತು ತಿಂಗಳ ಆಡಳಿತ ವೈಖರಿ ನೋಡಿದರೆ ಆಡಳಿತಕ್ಕೆ ಬಂದ ಏಳೆಂಟು ತಿಂಗಳಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ದೇಶದಲ್ಲಿ ಭ್ರಷ್ಟ ಸರ್ಕಾರ ಅಂತಾ ಇದ್ದರೆ ಅದು ರಾಜ್ಯದ ಕಾಂಗ್ರೆಸ್ ಸರ್ಕಾರ. ದಲಿತ ವಿರೋಧಿ, ಬಡವರ ಪರ ಕಾಳಜಿ ಇಲ್ಲದ ಸರ್ಕಾರ. ಒಂದೇ ಒಂದು ರೂಪಾಯಿ ಅಭಿವೃದ್ಧಿಗೆ ನೀಡದ ಸರ್ಕಾರ ಇದು. ಈ ಸರ್ಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಮೋದಿ ಭಾರತವನ್ನ ಅಗ್ರಗಣ್ಯ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ಹತ್ತು ವರ್ಷಗಳಲ್ಲಿ ಜನಪ್ರಿಯತೆ ಹೆಚ್ಚಿದೆಯೇ ಹೊರತು, ಕಡಿಮೆಯಾಗಿಲ್ಲ. ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ರಾಜ್ಯದಲ್ಲಿ 28 ಸ್ಥಾನ ಗೆಲ್ಲಬೇಕು. ಮತದಾನದ ಕೊನೆಯವರೆಗೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಭೆಗೂ ಮುನ್ನ ಹೆಚ್​ಡಿಕೆ ಹೇಳಿದ್ದು ಹೀಗೆ:ನಮ್ಮ ಗುರಿ ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್‌ ಎಲ್ಲ 28 ಕ್ಷೇತ್ರಗಳಲ್ಲಿಯೂ ಗೆಲ್ಲುವುದಾಗಿದೆ. ಅದಕ್ಕಾಗಿ ಬಿಜೆಪಿ, ಜೆಡಿಎಸ್‌ ಪಕ್ಷದ ಪ್ರಮುಖರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕರ್ತರಿಗೆ ಸಂದೇಶ ನೀಡುತ್ತೇವೆ. ನಿಜವಾದ ಮೈತ್ರಿ ಧರ್ಮ ಏನು ಅನ್ನೋದನ್ನ ತಿಳಿಸಿಕೊಡುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಜೆಡಿಎಸ್ ನಾಯಕರ ಸಭೆಗೂ ಮುನ್ನ ಮಾತನಾಡಿದ ಅವರು, ಈಗಾಗಲೇ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದೆ. ಉಭಯ ಪಕ್ಷಗಳ ಸಭೆ ಮಾಡಲು ಆಗಿರಲಿಲ್ಲ. ಆರೋಗ್ಯ ಸಮಸ್ಯೆಯಿಂದ ಸಭೆ ಮುಂದೂಡಲಾಗಿತ್ತು. ಎರಡೂ ಪಕ್ಷದಲ್ಲಿ ವಿಶ್ವಾಸದ ಮುಖಾಂತರ ಕೆಲಸ ಆಗಬೇಕು ಎಂದರು.

ಸಿಎಂ ಹಿಂದುಳಿದ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ನಮ್ಮ ಗುರಿ ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್‌ 28 ಅಭ್ಯರ್ಥಿಗಳನ್ನು ಗೆಲ್ಲುವುದಾಗಿದೆ. ಬಿಜೆಪಿ, ಜೆಡಿಎಸ್‌ ಪಕ್ಷದ ಪ್ರಮುಖರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕರ್ತರಿಗೆ ಸಂದೇಶ ನೀಡುತ್ತೇವೆ. ನಿಜವಾದ ಮೈತ್ರಿ ಧರ್ಮ ಏನು ಅನ್ನೋದನ್ನ ತಿಳಿಸಿಕೊಡುತ್ತೇವೆ. ಮೈಸೂರು, ಮಂಡ್ಯದಲ್ಲಿ ಜಂಟಿ ಸಭೆ ಮಾಡಿದ್ದೇವೆ. ಚಿಕ್ಕಪೇಟೆ ಶಾಸಕರ ಮನೆಯಲ್ಲಿ ಬೆಂಗಳೂರಿನ ನಾಲ್ಕೂ ಕ್ಷೇತ್ರದ ಗೆಲುವಿನ ಬಗ್ಗೆ ಮಾತಾಡಿದ್ದೇವೆ ಎಂದರು.

ಜೆಡಿಎಸ್ ನಾಯಜ ಬಂಡೆಪ್ಪ ಕಾಶಂಪೂರ್​ ಮಾತನಾಡಿ, ನಾವು ಎನ್‌ಡಿಎ ಮೈತ್ರಿ ಆದ ಮೇಲೆ ಎಲ್ಲ ವರಿಷ್ಠರು ಸೇರಿ ಮೋದಿ ಅವರಿಗೆ ಬಲ‌ ಕೊಡಲು 28ಕ್ಕೆ 28 ಕ್ಷೇತ್ರ ಗೆಲ್ಲುವ ಗುರಿ ಇದೆ. ಕಾರ್ಯಕರ್ತರು ಒಟ್ಟಾಗಲ್ಲ ಅಂತಾರೆ. ನೂರಕ್ಕೆ ನೂರರಷ್ಟು ಒಟ್ಟಾಗಿ ಕೆಲಸ ಮಾಡುತ್ತೇವೆ ಮತ್ತು 28ಕ್ಕೆ 28 ಕ್ಷೇತ್ರ ಗೆಲ್ಲುತ್ತೇವೆ. ಬೀದರ್‌ನಲ್ಲಿಯೂ ನಮಗೆ ಉತ್ತಮ ವಾತಾವರಣ ಇದೆ ಎಂದರು.

ಓದಿ:ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಭೇಟಿ ಮಾಡಿದ ಕಾಂಗ್ರೆಸ್ ನಾಯಕರು - MP Srinivas Prasad

Last Updated : Mar 29, 2024, 3:51 PM IST

ABOUT THE AUTHOR

...view details