ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್, ಬಿಜೆಪಿ ಮೈತ್ರಿಕೂಟ (ಎನ್ಡಿಎ) ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವರು, ಬಿಜೆಪಿ ಹಿರಿಯ ನಾಯಕರೂ ಆಗಿರುವ ಎಸ್.ಎಂ.ಕೃಷ್ಣರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಇಂದು ಸಂಜೆ ಸದಾಶಿವನಗರದಲ್ಲಿರುವ ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರೊಂದಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಪುಟ್ಟರಾಜು, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಇಂಡುವಾಳು ಸಚ್ಚಿದಾನಂದ, ಉಮೇಶ್ ಇದ್ದರು.
ಲೋಕಸಭೆ ಚುನಾವಣೆ ಹಾಗೂ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ನಾಯಕರು ಮಾತುಕತೆ ನಡೆಸಿದರು. ನಂತರ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ, ಹಿರಿಯರಾದ ರಾಜ್ಯದ ಮುಖ್ಯಮಂತ್ರಿಗಳಾಗಿ, ಕೇಂದ್ರ ಸಚಿವರಾಗಿ ಕೃಷ್ಣ ಅವರು ನಾಡಿಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರು ನಮ್ಮ ತಂದೆಯವರ ಸಮಕಾಲೀನರು. ತಂದೆಯವರಿಗಿಂತ ಆರು ತಿಂಗಳು ದೊಡ್ಡವರು. ನಾನು ನಾಮಪತ್ರ ಸಲ್ಲಿಸುವ ಮುನ್ನವೇ ಅವರ ಆಶೀರ್ವಾದ ಪಡೆಯಬೇಕಿತ್ತು. ಇವತ್ತು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ ಎಂದರು.
ನಾನು ಮೊದಲ ಬಾರಿಗೆ ರಾಜಕೀಯಕ್ಕೆ ಸ್ಪರ್ಧೆ ಮಾಡಿದಾಗ ಕೃಷ್ಣ ಅವರು ಆಶೀರ್ವಾದ ಮಾಡಿದ್ದರು. ಆ ಸಂಗತಿಯನ್ನು ಮಾತುಕತೆಯ ವೇಳೆ ಹಿರಿಯರಾದ ಕೃಷ್ಣ ಅವರೇ ನೆನೆಸಿಕೊಂಡರು. ನನ್ನನ್ನು ಆಶೀರ್ವಾದ ಮಾಡಿ ನಾಡಿನ ಅಭಿವೃದ್ಧಿಗಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ ಎಂದರು. ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದದ್ದು ಬಹಳ ಸಂತೋಷ ಉಂಟು ಮಾಡಿದೆ ಎಂದರು.