ಬೆಂಗಳೂರು:ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಇಲ್ಲಿ ನಡೆದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಸಮನ್ವಯ ಸಮಿತಿ ಸಭೆಯ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುವಾಗ ಮೂಗಿನಿಂದ ರಕ್ತಸ್ರಾವವಾಗಿದೆ. ತಕ್ಷಣವೇ ಅವರನ್ನು ಜಯನಗರ ಬಡಾವಣೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಸಭೆ ನಡೆಸಲಾಯಿತು. ಬಳಿಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಜೊತೆಗೂಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಿದ್ದ ವೇಳೆ ದಿಢೀರ್ ಆಗಿ ಮೂಗಿನಿಂದ ರಕ್ತಸ್ರಾವವಾಗಿದೆ. ಅವರ ಬಿಳಿ ಅಂಗಿಯ ಮೇಲೆಲ್ಲ ರಕ್ತ ಚಿಮ್ಮಿದ್ದು ಕಂಡುಬಂದಿತು.
ರಕ್ತ ಬಂದಿದ್ದರಿಂದ ಸ್ಥಳದಲ್ಲಿದ್ದ ನಾಯಕರು ಗಾಬರಿಯಾದರು. ಈ ವೇಳೆ ಅಲ್ಲಿಯೇ ಇದ್ದ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ತಂದೆಯನ್ನು ತಕ್ಷಣವೇ ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ದರು. ರಕ್ತ ಸುರಿಯುತ್ತಿದ್ದರೂ ತೀರಾ ಗಾಬರಿಯಾಗದ ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರಿಗೆ ಮಾತನಾಡಲು ಹೇಳುತ್ತ ಅಲ್ಲಿಂದ ಆಸ್ಪತ್ರೆಗೆ ಸಾಗಿದರು.