ಬೆಂಗಳೂರು: ಗ್ಯಾರಂಟಿಗಳ ಬಗ್ಗೆ ಹೇಳಿದ್ದೇನೆಯೇ ಹೊರತು, ಮಹಿಳೆಯರಿಗೆ ಅಪಮಾನ ಮಾಡುವ ರೀತಿಯಲ್ಲಿ ನಾನು ಮಾತನಾಡಿಲ್ಲ. ಅನಗತ್ಯವಾಗಿ ಕಾಂಗ್ರೆಸ್ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ಸೋಲುವ ಹತಾಶೆ ಕಾಂಗ್ರೆಸ್ ಅನ್ನು ಕಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ತಮ್ಮ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ನೀಡುತ್ತಿರುವ ಪ್ರತಿಕ್ರಿಯೆಗಳಿಗೆ ತಮ್ಮ ನಿವಾಸದ ಬಳಿ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ನಾಯಕರಿಗೆ ಬರ, ನೀರಿನ ಸಮಸ್ಯೆಗಿಂತ ರಾಜಕೀಯವೇ ಹೆಚ್ಚಾಗಿದೆ ಎಂದು ಟೀಕಿಸಿದರು. ಸಿದ್ದರಾಮಯ್ಯ ಅವರ ಬಳಿ ಈ ಬಗ್ಗೆ ಹೇಳುವುದು ಏನಿದೆ? ಇದನ್ನು ಬಿಟ್ಟು ಬೇರೇನು ಹೇಳಬೇಕಿಲ್ಲ. ನಾನು ಹೇಳಿದ್ದೇ ಬೇರೆ, ಇವರು ತಿರುಚಿ ಹೇಳಿದ್ದೇ ಬೇರೆ. ಗ್ಯಾರಂಟಿಗಳ ಹೆಸರಲ್ಲಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಷ್ಟೇ ಹೇಳಿದ್ದೇನೆ. ನಾನು ಮಹಿಳೆಯರನ್ನು ಅವಮಾನ ಮಾಡಿದ್ದೀನಾ? ಖಂಡಿತಾ ಇಲ್ಲ. ಮುಗ್ದ ಜನರನ್ನು, ಮಹಿಳೆಯರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದೇನೆ. ನೀವು ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದೇನೆ ಎಂದರು.
ನಾನಾಗಲಿ, ನನ್ನ ಕುಟುಂಬವಾಗಲಿ ಮಹಿಳೆಯರ ಬಗ್ಗೆ ಅಗೌರವದಿಂದ ನಡೆದುಕೊಂಡಿಲ್ಲ. ನಡೆದುಕೊಳ್ಳುವುದೂ ಇಲ್ಲ. ಕಷ್ಟ ಅಂತ ಬಂದಾಗ ನಾನು ನೆರವಾಗಿದ್ದೇನೆ. ಅಧಿಕಾರ ಸಿಕ್ಕಿದಾಗ ಮಹಿಳೆಯರಿಗಾಗಿ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಮಹಿಳೆಯರ ಕೂಗಿಗೆ ಸ್ಪಂದಿಸಿ ಸಾರಾಯಿ, ಲಾಟರಿ ನಿಷೇಧಿಸಿದ್ದೇನೆ. ನಾನು ಮಹಿಳೆಯರಿಗೆ ನೀಡಿದ ಗೌರವ ಇದು ಎಂದು ಹೆಚ್ಡಿಕೆ ಹೇಳಿದರು.