ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ನಿರಾಕರಿಸಿದ ಹೆಚ್​ಡಿಕೆ, ನಿಖಿಲ್ - Chikkaballapur Lok Sabha

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಬೇಕೆಂಬ ಆಹ್ವಾನವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ತಿರಸ್ಕರಿಸಿದ್ದಾರೆ.

Etv Bharat
Etv Bharat

By ETV Bharat Karnataka Team

Published : Mar 10, 2024, 7:26 PM IST

ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸ್ಥಳೀಯ ನಾಯಕರು ನೀಡಿದ ಆಹ್ವಾನವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಕ್ಷೇತ್ರ ಬಿಜೆಪಿಗಾದರೂ ಸಿಗಲಿ, ಜೆಡಿಎಸ್​​ಗಾದರೂ ಸಿಗಲಿ, ಯಾರೇ ಆದರೂ ಅವರು ಎನ್​ಡಿಎ ಅಭ್ಯರ್ಥಿಯೇ ಆಗಿರುತ್ತಾರೆ. ಅವರ ಗೆಲುವಿನ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಬೇಕು ಎಂದು ಹೆಚ್‌ಡಿಕೆ ತಾಕೀತು ಮಾಡಿದ್ದಾರೆ.

ಬಿಜೆಪಿ ಜೊತೆಗೂಡಿ ಒಗ್ಗಟ್ಟಿನ ಕೆಲಸ: ಕ್ಷೇತ್ರ ಹಂಚಿಕೆ ಹಾಗೂ ಅಭ್ಯರ್ಥಿ ಘೋಷಣೆಗೂ ಮುನ್ನ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಜೆಡಿಎಸ್‌ ಮುಖಂಡರ ಜೊತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದರು. ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಕ್ಷೇತ್ರದಲ್ಲಿನ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಸುದೀರ್ಘ ಸಮಾಲೋಚಿಸಿದರು. ಈ ವೇಳೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಮುಖಂಡರು ಮಾಡಿದ ಒತ್ತಾಯವನ್ನು ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ನಯವಾಗಿ ತಿರಸ್ಕರಿಸಿದರು. ಅಭ್ಯರ್ಥಿ ಯಾರೇ ಆದರೂ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮ ಪಕ್ಷದ ಮೇಲಿದೆ. ಹೀಗಾಗಿ ಮಿತ್ರಪಕ್ಷ ಬಿಜೆಪಿ ಜೊತೆಗೂಡಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮುಖಂಡರಿಗೆ ತಾಕೀತು ಮಾಡಿದರು.

ಮುಂದುವರೆದು, ಜೆಡಿಎಸ್-ಬಿಜೆಪಿ ಮೈತ್ರಿಯ ಬಗ್ಗೆ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟ ಮಾಜಿ ಮುಖ್ಯಮಂತ್ರಿ, ಮೈತ್ರಿ ಧರ್ಮಕ್ಕೆ ಕಟ್ಟುಬಿದ್ದು ಎಲ್ಲರೂ ಅಭ್ಯರ್ಥಿ ಪರವಾಗಿ ಕೆಲಸ ಮಾಡಬೇಕು. ಯಾರೇ ಅಭ್ಯರ್ಥಿಯಾದರೂ ಅವರು ಎನ್​ಡಿಎ ಅಭ್ಯರ್ಥಿಯೇ ಆಗಿರುತ್ತಾರೆ. ಅವರ ಗೆಲುವಿನ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ನೇರ ಮಾತುಗಳಲ್ಲಿ ಮುಖಂಡರಿಗೆ ತಿಳಿಸಿದರು.

ಇದೇ ವೇಳೆ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು ಹಾಗೂ ಮುಖಂಡರಿಂದ ಸಲಹೆ ಪಡೆದು, ತಮ್ಮ ಅಭಿಪ್ರಾಯ ಸ್ಪಷ್ಟವಾಗಿ ಹೇಳಿದರು. ಈ ವೇಳೆ ಕ್ಷೇತ್ರದಲ್ಲಿ ಪಕ್ಷಕ್ಕೆ ಅನ್ಯಾಯ ಆಗದಂತೆ ಎಚ್ಚರಿಕೆ ಹೆಜ್ಜೆಗಳನ್ನು ಇಡುವಂತೆ ಮುಖಂಡರು ಮನವಿ ಮಾಡಿದರು.

ಬಿಜೆಪಿ ನಾಯಕರ ಜೊತೆ ಚರ್ಚೆ:ಜೆಡಿಎಸ್-ಬಿಜೆಪಿ ಒಂದಾಗಿ ಎದುರಿಸಿದರೆ ಖಚಿತವಾಗಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಗೆಲ್ಲಬಹುದು. ಹಿಂದೆ ಬಿ.ಎನ್.ಬಚ್ಚೇಗೌಡರ ಗೆಲುವಿನಲ್ಲಿ ಜೆಡಿಎಸ್ ಪಾತ್ರ ದೊಡ್ಡದಿತ್ತು. ಆದ್ದರಿಂದ ಈ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಬಿಜೆಪಿಯನ್ನು ಕೇಳಬೇಕು ಎಂದು ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಿದರು. ಈ ಬಗ್ಗೆ ತಾವು ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸುವುದಾಗಿ ಮುಖಂಡರಿಗೆ ತಿಳಿಸಿದ ಹೆಚ್​ಡಿಕೆ, ಕ್ಷೇತ್ರ ಯಾವ ಪಕ್ಷದ ಪಾಲಾದರೂ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಎಲ್ಲಾ ಹಂತದಲ್ಲಿಯೂ ಮಿತ್ರಪಕ್ಷದ ಕಾರ್ಯಕರ್ತರು, ಮುಖಂಡರ ಜತೆ ವಿಶ್ವಾಸ-ನಂಬಿಕೆಯಿಂದ ದುಡಿಮೆ ಮಾಡಬೇಕು.‌ ಅಭ್ಯರ್ಥಿ ಆಯ್ಕೆ ಬಗ್ಗೆ ಮಿತ್ರಪಕ್ಷದ ನಾಯಕರ ಜೊತೆ ಸಮಾಲೋಚನೆ ನಡೆಸುವೆ ಎಂದು ಹೇಳಿದರು.

ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷರಾದ ಕೆ.ಎಂ.ಕೃಷ್ಣಾರೆಡ್ಡಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕರಾದ ಇ.ಕೃಷ್ಣಪ್ಪ, ಹೆಚ್.ಎಂ.ರಮೇಶ್ ಗೌಡ, ಡಾ.ಶ್ರೀನಿವಾಸ ಮೂರ್ತಿ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:'ಶೋಭಾ ಕರಂದ್ಲಾಜೆಗೆ ಟಿಕೆಟ್​ ನೀಡಬಾರದು': ಚಿಕ್ಕಮಗಳೂರಿನಲ್ಲಿ ಬಿಜೆ‍ಪಿ ಕಾರ್ಯಕರ್ತರ ಆಗ್ರಹ

ABOUT THE AUTHOR

...view details