ರಾಮನಗರ:ಚನ್ನಪಟ್ಟಣ ಕ್ಷೇತ್ರದಲ್ಲಿ ಉಪಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಇಂದಿನಿಂದ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದು, ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಮತಬೇಟೆ ನಡೆಸಿದರು.
ಚನ್ನಪಟ್ಟಣ ಕ್ಷೇತ್ರದ ವಿರುಪಾಕ್ಷಿಪುರ ಗ್ರಾಮದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಇಂದು ದೇವೇಗೌಡರು ಭಾಗವಹಿಸಿದ್ದರು. ಈ ವೇಳೆ ಅವರಿಗೆ ನಿಖಿಲ್ ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರು ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರು ನನ್ನನ್ನ ಹೊರಗಿನವರು ಅಂತಾರೆ, ನನಗೆ ಇವಾಗ 36 ವರ್ಷ ವಯಸ್ಸು. ನಾನು ಹುಟ್ಟುವ ಮೊದಲಿನಿಂದಲೂ ದೇವೇಗೌಡರು ಮತ್ತು ಕುಮಾರಣ್ಣರ ಸಂಬಂಧ ಚನ್ನಪಟ್ಟಣಕ್ಕೆ ಇದೆ. ದೇವೇಗೌಡರ ಇಗ್ಗಲೂರು ಡ್ಯಾಂನ ಕೊಡುಗೆಯಿಂದ ಜನ ನನ್ನನ್ನ ಪ್ರೀತಿಯಿಂದ ಹರಸುತ್ತಿದ್ದಾರೆ. ಕ್ಷೇತ್ರ ಮತ್ತು ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದು ದೇವೇಗೌಡರ ಕೆಲಸ ಮತ್ತು ಕುಮಾರಣ್ಣರ ಸಾಲಮನ್ನಾ ಯೋಜನೆಯನ್ನ ಈಗಲೂ ಜನ ಸ್ಮರಿಸುತ್ತಾರೆ ಎಂದರು.
ಮೂರನೇ ಬಾರಿ ಯುವಕ ನಿಖಿಲ್ಗೆ ತೊಂದರೆ ಆಗಬಾರದು ಎಂದು ರಾಜ್ಯದ ನಾನಾ ಮೂಲೆಗಳಿಂದ ಎರಡೂ ಪಕ್ಷದ ಕಾರ್ಯಕರ್ತರ ದಂಡು ಬಂದು ಪ್ರಚಾರ ಮಾಡ್ತಿದ್ದಾರೆ. ನಾನು ಎರಡು ಚುನಾವಣೆಗಳನ್ನ ಎದುರಿಸಿದ್ದೇನೆ. ಎರಡು ಚುನಾವಣೆಗಳ ಸೋಲಿನ ನೋವಿದೆ. ಇಲ್ಲಿ ನಾನು ಜನಪ್ರತಿನಿಧಿ ಆಗಬೇಕೆಂದು ಬಂದಿಲ್ಲ. ನಮ್ಮ ಮನೆಗೆ ಬರುವ ಎಲ್ಲಾ ವರ್ಗದವರಿಗೂ ಪ್ರಾಮಾಣಿಕ ಕೆಲಸ ಮಾಡಲು ಬಂದಿದ್ದೇವೆ ಎಂದು ತಿಳಿಸಿದರು.