ಕರ್ನಾಟಕ

karnataka

ETV Bharat / state

ಉಪ ನೋಂದಣಾಧಿಕಾರಿಗಳು ನೋಂದಣಿ ಕಾಯಿದೆ, ನಿಯಮಗಳ ಅನ್ವಯ ಮಾತ್ರ ಕಾರ್ಯನಿರ್ವಹಿಸಬೇಕು: ಹೈಕೋರ್ಟ್ - HIGH COURT - HIGH COURT

ರಾಜ್ಯ ಸರ್ಕಾರ ರೂಪಿಸಿರುವ ನೋಂದಣಿ ನಿಯಮಗಳು ಮತ್ತು ನೋಂದಣಿ ಕಾಯಿದೆ ಅನ್ವಯ ಮಾತ್ರ ಉಪನೋಂದಣಾಧಿಕಾರಿಗಳು ಕಾರ್ಯನಿರ್ವಹಿಸಬಹುದಾಗಿದೆ ಎಂದು ಹೈಕೋರ್ಟ್​ ಆದೇಶಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : May 30, 2024, 2:38 PM IST

ಬೆಂಗಳೂರು:ನೋಂದಣಿ ಕಾಯಿದೆ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ನೋಂದಣಿ ನಿಯಮಗಳ ಅನ್ವಯ ಮಾತ್ರ ಉಪನೋಂದಣಾಧಿಕಾರಿಗಳು ಕಾರ್ಯನಿರ್ವಹಿಸಬಹುದಾಗಿದೆ ಎಂಬುದಾಗಿ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ. ಜತೆಗೆ, ಸಾಲಗಾರರ ಆದಾಯ ತೆರಿಗೆ ಪಾವತಿ ಬಾಕಿಯಿದೆ ಎಂಬ ಕಾರಣ ನೀಡಿ ಅವರ ಆಸ್ತಿಯನ್ನು ಹರಾಜು ಮೂಲಕ ಖರೀದಿ ಮಾಡಿದವರಿಗೆ ನೋಂದಣಿ ಮಾಡುವುದಕ್ಕೆ ನಿರಾಕರಿಸುವಂತಿಲ್ಲ ಎಂದು ಆದೇಶಿಸಿದೆ.

ಬ್ಯಾಂಕ್‌ನ ಹರಾಜಿನ ಮೂಲಕ ವ್ಯಕ್ತಿಯೊಬ್ಬರಿಗೆ ಸೇರಿದ್ದ ಜಮೀನು ಖರೀದಿಸಿದ್ದು, ತಮ್ಮ ಹೆಸರಿಗೆ ನೋಂದಣಿ ಮಾಡಿಕೊಡದ ಉಪ ನೋಂದಣಾಧಿಕಾರಿಗಳ ಕ್ರಮ ಪ್ರಶ್ನಿಸಿ ಭರತ್ ಗೌಡ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೇ, ನೋಂದಣಿ ನಿಯಮಗಳ ಅಡಿ ಯಾವುದೇ ಗೊಂದಲಗಳು ಇಲ್ಲವಾದಲ್ಲಿ ನೋಂದಣಿ ಮಾಡದೇ ನಿರಾಕರಿಸುವ ಅಧಿಕಾರವನ್ನು ಉಪನೋಂದಣಾಧಿಕಾರಿಗಳಿಗೆ ಇಲ್ಲ ಎಂದು ಪೀಠ ತಿಳಿಸಿದೆ. ಹಣಕಾಸು ಸ್ವತ್ತುಗಳು ಮತ್ತು ಭದ್ರತಾ ಹಿತಾಸಕ್ತ ಜಾರಿ ಕಾಯಿದೆ 2002 (ಸರ್ಫೇಸಿ ಕಾಯಿದೆ) ಸೆಕ್ಷನ್ 26(ಇ) ಭದ್ರತಾ ಆಸಕ್ತಿ ನೋಂದಣಿಯ ನಂತರ ಜಾರಿಯಲ್ಲಿರುವ ಕಾನೂನಿಗಿಂತ ಸುರಕ್ಷಿತ ಸಾಲಗಾರರಿಗೆ ಆದ್ಯತೆಯನ್ನು ಕಡ್ಡಾಯಗೊಳಿಸುತ್ತದೆ.

ಸೆಕ್ಷನ್ 35 ಪ್ರಕಾರ, ಸದ್ಯಕ್ಕೆ ಜಾರಿಯಲ್ಲಿರುವ ಕಾನೂನಿನಲ್ಲಿ ಅಸಮಂಜಸವಾಗಿದ್ದರೂ ಈ ಕಾಯಿದೆ ಪರಿಣಾಮ ಬೀರಲಿದೆ. ಆದರೆ, ಈ ರೀತಿಯ ಪ್ರಕರಣಗಳಲ್ಲಿ ಸಾಲಗಾರನ ಹಕ್ಕು ನ್ಯಾಯಾಲಯ ಮಧ್ಯ ಪ್ರವೇಶ ಮಾಡಿ ಯಾವುದೇ ಆದೇಶ ಮಾಡದಿದ್ದಲ್ಲಿ ಅದನ್ನು ತಡೆಹಿಡಿಯಲಾಗದು. ಪ್ರಸ್ತುತ ಪ್ರಕರಣದಲ್ಲಿ ನ್ಯಾಯಾಲಯ, ಅರೆ - ನ್ಯಾಯಾಲಯದ ಮುಂದೆ ಯಾವುದೇ ರೀತಿಯ ಪ್ರಕ್ರಿಯೆ ಪ್ರಾರಂಭಿಸಿಲ್ಲ.

ಹೀಗಾಗಿ ಉಪನೋಂದಣಿ ನಿಯಮ 171ರ ಅಡಿ ಯಾವುದೇ ಉಲ್ಲಂಘನೆಯಾಗಿದ್ದಲ್ಲಿ ಮಾತ್ರ ನೋಂದಣಿಗೆ ತಡೆ ಹಿಡಿಯಬೇಕು. ಇಲ್ಲವಾದಲ್ಲಿ ಸಬ್ ರಿಜಿಸ್ಟ್ರಾರ್ ಅವರಿಗೆ ನೋಂದಣಿ ನಿರಾಕರಸಿಸುವ ಅಧಿಕಾರ ಹೊಂದಿರುವುದಿಲ್ಲ. ಆದ್ದರಿಂದ ತಕ್ಷಣ ಬಿಡ್‌ದಾರರಿಗೆ ಹೆಸರಿಗೆ ಪ್ರಸ್ತಾವಿತ ಜಮೀನನ್ನು ನೋಂದಣಿ ಮಾಡಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ. ಅಲ್ಲದೇ, ಈ ಕುರಿತಂತೆ ರಾಜ್ಯ ಸರ್ಕಾರ ಈ ಸಂಬಂಧ ನೋಂದಣಿ ನಿಯಮಗಳ ಕುರಿತಂತೆ ಸೂಕ್ತ ರೀತಿಯ ಸುತ್ತೋಲೆ ಹೊರಡಿಸಬೇಕು ಎಂದು ಪೀಠ ಸಲಹೆ ನೀಡಿದೆ.

ಪ್ರಕರಣದ ಹಿನ್ನೆಲೆ:ಬೆಂಗಳೂರು ನಗರದ ವಿಲ್ಸ್‌ನ್ ಗಾರ್ಡನ್‌ನ ಹೊಂಬೇಗೌಡನಗರದಲ್ಲಿ 6000 ಚದರ ಅಡಿಯ ಅಡಮಾನ ಆಸ್ತಿಗೆ ಸಂಬಂಧಿಸಿದಂತೆ 2022 ಮಾರ್ಚ್ ತಿಂಗಳಲ್ಲಿ ಕೆನರಾ ಬ್ಯಾಂಕ್ ನಡೆಸಿದ ಹರಾಜಿನಲ್ಲಿ ಅರ್ಜಿದಾರರು ಯಶಸ್ವಿ ಬಿಡ್‌ದಾರರಾಗಿದ್ದರು. ಹರಾಜಿನ ಎಲ್ಲ ಪ್ರಕ್ರಿಯೆಗಳು ಮುಗಿತ ನಂತರ 2022ರ ಸೆಪ್ಟಂಬರ್ 30 ರಂದು ಅವರ ಪರವಾಗಿ ಮಾರಾಟ ಪ್ರಮಾನ ಪತ್ರವನ್ನು ನೀಡಲಾಗಿತ್ತು.

ಅಲ್ಲದೇ, ಜಮೀನಿಗೆ ನೋಂದಣಿಗೆ ಸಂಬಂಧಿಸಿದಂತೆ ಅಗತ್ಯವಿರುವ ಸ್ಟ್ಯಾಂಪ್​ ಮೊತ್ತ ಪಾವತಿಸಲಾಗಿದ್ದು, ಜಮೀನನ್ನು ತನ್ನ ಹೆಸರಿಗೆ ನೋಂದಣಿ ಮಾಡಿಕೊಡುವಂತೆ ಕೋರಿ ಜೆ.ಪಿ.ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಬ್ ರಿಜಿಸ್ಟ್ರಾರ್, ಜಮೀನಿನ ಮೂಲ ಮಾಲೀಕರು ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಆದ್ದರಿಂದ ಜಮೀನು ನೋಂದಣಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದರು. 2024ರ ಫೆಬ್ರವರಿ 12 ರಂದು ಮತ್ತೊಂದು ಬಾರಿ ಮನವಿ ಸಲ್ಲಿಸಿದ್ದರೂ ಸಬ್ ರಿಜಿಸ್ಟ್ರಾರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:'ಸಚಿವರ ಗಮನಕ್ಕೆ ಬಾರದೆ ಹಣ ವರ್ಗಾವಣೆ ಆಗುತ್ತೆ, ನನ್ನ ಇಲಾಖೆಯಲ್ಲೂ ಕೆಲವು ವ್ಯತ್ಯಾಸಗಳಾಗಿವೆ' - M B Patil

ABOUT THE AUTHOR

...view details