ಕರ್ನಾಟಕ

karnataka

ETV Bharat / state

ಸರ್ಕಾರಿ ಅಭಿಯೋಜಕರನ್ನೇ ಎಸ್​ಪಿಪಿಯನ್ನಾಗಿ ನೇಮಿಸುವ ಆದೇಶ ರದ್ದು - ಪೋಕ್ಸೊ

ಪೋಕ್ಸೊ ಅಡಿ ರಚನೆಯಾಗಿರುವ ನ್ಯಾಯಾಲಯಗಳಿಗೆ ಸರ್ಕಾರಿ ಅಭಿಯೋಜಕರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸುವ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

High Court
ಹೈಕೋರ್ಟ್

By ETV Bharat Karnataka Team

Published : Jan 28, 2024, 11:33 AM IST

ಬೆಂಗಳೂರು:ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅಡಿ ರಚನೆಯಾಗಿರುವ ನ್ಯಾಯಾಲಯಗಳಿಗೆ ಸರ್ಕಾರಿ ಅಭಿಯೋಜಕರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ (ಎಸ್‌ಪಿಪಿ) ನಾಮನಿರ್ದೇಶನ ಮಾಡುವ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ರದ್ದುಗೊಳಿಸಿತು.

ಪೋಕ್ಸೊ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ನಡೆಸಲು ಗುತ್ತಿಗೆ ಆಧಾರದ ಮೇಲೆ ಎಸ್‌ಪಿಪಿಗಳಾಗಿ ನೇಮಕಗೊಂಡ ವಕೀಲರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್​ ಸಂಜಯ್ ಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಮುಂದಿನ ಮೂರು ತಿಂಗಳಲ್ಲಿ ಪೋಕ್ಸೊ ಕಾಯಿದೆಯಡಿ ರಚನೆಯಾಗಿರುವ ನ್ಯಾಯಾಲಯಳಿಗೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸುವಂತೆ ಸೂಚನೆ ನೀಡಿದೆ. ಜತೆಗೆ, ಗುತ್ತಿಗೆ ಆಧಾರದ ಮೇಲೆ ಈ ಹಿಂದೆ ಎಸ್‌ಪಿಪಿಗಳಾಗಿ ನೇಮಕಗೊಂಡ ವಕೀಲರು ತಮ್ಮ ಕರ್ತವ್ಯಗಳನ್ನು ಪುನರಾರಂಭಿಸಬಹುದು ಎಂದು ಪೀಠ ತಿಳಿಸಿದೆ.

ಪೋಕ್ಸೊ ಕಾಯಿದೆಯ ಸೆಕ್ಷನ್​ 32ರ ಅಡಿ ರಾಜ್ಯ ಸರ್ಕಾರವು ಪ್ರತಿ ವಿಶೇಷ ನ್ಯಾಯಾಲಯಕ್ಕೆ ಎಸ್‌ಪಿಪಿಯನ್ನು ನೇಮಿಸುವ ಅಗತ್ಯವಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಅದರಂತೆ ರಾಜ್ಯ ಸರ್ಕಾರವು ಪ್ರತಿ ವಿಶೇಷ ನ್ಯಾಯಾಲಯಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಬೇಕು ಮತ್ತು ಹಾಗೆ ನೇಮಕಗೊಂಡ ವ್ಯಕ್ತಿಯು ಪೋಕ್ಸೊ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಮಾತ್ರ ಪ್ರಕರಣಗಳನ್ನು ನಡೆಸಬೇಕು. ಅಲ್ಲದೆ, ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಬೇಕಾದ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಕರಣಗಳನ್ನು ನಡೆಸಲು ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ಪೋಕ್ಸೊ ಕಾಯಿದೆಯಡಿ ಎಸ್‌ಪಿಪಿಗಳು ವಿಶೇಷ ನ್ಯಾಯಾಲಯಗಳಲ್ಲಿ ತಮಗೆ ವಹಿಸಲಾದ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕೆಲಸವನ್ನು ತೆಗೆದುಕೊಳ್ಳುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಕಾನೂನಿನ ಅಡಿಯಲ್ಲಿ ರಾಜ್ಯ ಸರ್ಕಾರ ಹಾಲಿ ಅಭಿಯೋಜಕರನ್ನು ಎಸ್‌ಪಿಪಿಗಳನ್ನಾಗಿ ನೇಮಕ ಮಾಡಲು ಸಾಧ್ಯವಿಲ್ಲ. ಎಸ್‌ಪಿಪಿಗಳಾಗಿ ಕೆಲವು ಅರ್ಜಿದಾರರ ಅಧಿಕಾರಾವಧಿ ಇನ್ನೂ ಅಸ್ತಿತ್ವದಲ್ಲಿದೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ವಕೀಲರು, ಖಾಯಂ ಮಾಡುವಂತೆ ಕೇಳುವುದಿಲ್ಲ ಎಂದು ಮುಚ್ಚಳಿಕೆಯ ಮೂಲಕ ಭರವಸೆ ನೀಡಿರುವುದರಿಂದ ಅವರನ್ನು ಖಾಯಂಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

ಎಸ್‌ಪಿಪಿಗಳ ನೇಮಕಾತಿ ವಿಷಯದಲ್ಲಿ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ಆತಂಕಕಾರಿ ಏರಿಕೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸೂಚಿಸಿರುವ ಕಾರ್ಯವಿಧಾನವನ್ನು ಅನುಸರಿಸಬೇಕಾಗುತ್ತದೆ ಎಂದು ವಾದ ಮಂಡಿಸಿದ್ದರು.

ಇದನ್ನೂ ಓದಿ:ರೇರಾ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಅಧ್ಯಕ್ಷರ ನೇಮಿಸಲು ಹೈಕೋರ್ಟ್ ನಿರ್ದೇಶನ

ABOUT THE AUTHOR

...view details