ಬೆಂಗಳೂರು: ನಟ ಕಬೀರ್ ಬೇಡಿ ಅವರ ಆತ್ಮಕಥನ ಸ್ಟೋರಿಸ್ 'ಐ ಮಸ್ಟ್ ಟೆಲ್; ದಿ ಎಮೋಷನಲ್ ಲೈಫ್ ಆಫ್ ಆನ್ ಆ್ಯಕ್ಟರ್' ರಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಉಲ್ಲೇಖಿಸಿರುವ ಹಿನ್ನೆಲೆ, ಕೃತಿಯ ಪ್ರಕಟಣೆ ಮತ್ತು ಮಾರಾಟಕ್ಕೆ ನಿರ್ಬಂಧ ವಿಧಿಸಲು ಕೋರಿ ಕಬೀರ್ ಬೇಡಿ ಅವರ ಹಿರಿಯ ಸಹೋದರ ಟಿ.ಆರ್ ಬೇಡಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕಬೀರ್ ಬೇಡಿ ಅವರ ಈ ಆತ್ಮಕಥನ ಪುಸ್ತಕವನ್ನು ನಿರ್ಬಂಧಿಸಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಟಿ.ಆರ್ ಬೇಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೆಚ್.ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ಈ ಮೇಲ್ಮನವಿ ಅರ್ಜಿಯಲ್ಲಿ ಕೇಳಿರುವ ಮನವಿಯನ್ನು ಪರಿಗಣಿಸಲು ಯಾವುದೇ ಆಧಾರವಿಲ್ಲ. ವಿಚಾರಣಾ ನ್ಯಾಯಾಲಯ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿರುವುದಕ್ಕೆ ಕಾರಣ ನೀಡಿದೆ. ಆ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಹಾಗೂ ಮನವಿ ಪುರಸ್ಕರಿಸಲು ಯಾವುದೇ ಮೆರಿಟ್ ಇಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಅಲ್ಲದೇ, ವಿಚಾರಣಾ ನ್ಯಾಯಾಲಯ 2022ರ ಸೆ.27ರಂದು ಆದೇಶ ನೀಡಿದೆ. ಬಳಿಕ 9 ತಿಂಗಳ ನಂತರ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಜೊತೆಗೆ 2021ರಲ್ಲಿಯೇ ಪುಸ್ತಕ ಪ್ರಕಟಗೊಂಡು, ಮಾರಾಟವಾಗಿದೆ. ಈ ಹಂತದಲ್ಲಿ ತಡೆ ನೀಡಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಅರ್ಜಿದಾರರು ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಕಬೀರ್ ಬೇಡಿ ಅವರ ಕೃತಿಯಲ್ಲಿ ತನ್ನ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಮಾಡಿದ್ದಾರೆ, ಹಾಗಾಗಿ ಅವರಿಂದ ವಾರ್ಷಿಕ ಶೇ.24ರ ಬಡ್ಡಿಯಂತೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ಅದರಲ್ಲಿ ಕಬೀರ್ ಬೇಡಿ ಹಾಗೂ ಅವರ ಪುಸಕ್ತವನ್ನು ಹೊರತರುತ್ತಿರುವ ವೆಸ್ಟ್ ಲ್ಯಾಂಡ್ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿತ್ತು. ಜೊತೆಗೆ ತಮ್ಮ ವಿರುದ್ಧ ಕೃತಿಯಲ್ಲಿ ದಾಖಲಿಸಿರುವ ಅವಹೇಳನಕಾರಿ ಅಂಶಗಳನ್ನು ತೆಗೆದುಹಾಕುವಂತೆ ಕೃತಿಕಾರರು ಮತ್ತು ಪ್ರಕಾಶಕರಿಗೆ ಸೂಚನೆ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು. ಕಬೀರ್ ಬೇಡಿ ಅವರು ತಮ್ಮ ಪುಸಕ್ತಗಳು ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಲಿ ಎಂದು ಸಾಕಷ್ಟು ಸುಳ್ಳು ಅಂಶಗಳನ್ನು ದಾಖಲಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು.
ಇದನ್ನೂ ಓದಿ:ಪಾರ್ಟ್ 2ಗೆ ಪೂರ್ಣಗೊಳ್ಳಲ್ಲ 'ಪುಷ್ಪ': 'ದಿ ರೂಲ್' ಬಳಿಕ ಬರಲಿದೆ 'ದಿ ರೋರ್' - ಪುಷ್ಪ 3 ಲೋಡಿಂಗ್?
ಆದರೆ ವಿಚಾರಣಾ ನ್ಯಾಯಾಲಯ, ಪುಸ್ತಕ ಈಗಾಗಲೇ ಪ್ರಕಟಗೊಂಡು ಸಾಕಷ್ಟು ಸಂಖ್ಯೆಯ ಪ್ರತಿಗಳು ಮಾರಾಟವಾಗಿವೆ. ಈ ಹಂತದಲ್ಲಿ ತಡೆ ನೀಡಲಾಗದು ಎಂದು ಹೇಳಿರುವುದಲ್ಲದೇ, ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ ಎನ್ನಲಾದ ಅವಹೇಳನಕಾರಿ ಅಂಶಗಳು ನಿಜವೇ ಸುಳ್ಳೇ ಎಂಬುದನ್ನು ತಿಳಿಯಲು ಪೂರ್ಣ ಪ್ರಮಾಣದ ವಿಚಾರಣೆ ನಡೆಯಬೇಕಾಗಿದೆ ಎಂದು ಆದೇಶಿಸಿದೆ. ಹಾಗಾಗಿ ಯಾವುದೇ ಮಧ್ಯಂತರ ಆದೇಶ ನೀಡಲಾಗದು, ಒಂದು ವೇಳೆ ಮಧ್ಯಂತರ ತಡೆ ನೀಡಿದರೆ ಅದೇ ಅಂತಿಮ ಆದೇಶವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ:ಯಶ್ 'ಟಾಕ್ಸಿಕ್' ಸಿನಿಮಾದಲ್ಲಿ ಶಾರುಖ್ ಖಾನ್?: ಚರ್ಚೆಯಲ್ಲಿ ಚಿತ್ರತಂಡ