ಬೆಂಗಳೂರು: ಮಲಹೊರುವ ಜಾಡಮಾಲಿಗಳ ನಿಷೇಧ ಮತ್ತು ಪುನರ್ವಸತಿ ಕಾಯಿದೆ 2013ರ ಅಡಿಯಲ್ಲಿ ಇರುವ ನಿಯಮದ ಅನುಸಾರ ಕೈಗೊಂಡಿರುವ ಕ್ರಮಗಳ ಕುರಿತಂತೆ ಜುಲೈ 9ರಂದು ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ನಿಷೇಧದ ನಡುವೆಯೂ ಮಲ ಹೊರುವ ಪದ್ಧತಿ ಜಾರಿಯಲ್ಲಿರುವ ಕುರಿತು ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಅರ್ಜಿ ಮತ್ತು ಆಲ್ ಇಂಡಿಯನ್ ಸೆಂಟ್ರಲ್ ಕೌನ್ಸಿಲ್ ಟ್ರೇಡ್ ಯೂನಿಯನ್ ಮತ್ತು ಹೈಕೋರ್ಟ್ ಕಾನೂನು ಸೇವೆಗಳ ಪಾಧಿಕಾರ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರೊಬ್ಬರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಜೈನಾ ಕೊಥಾರಿ, ಕಾಯಿದೆಯಡಿಯಲ್ಲಿ ರೂಪಿಸಿರವ ನಿಯಮಗಳನ್ನು ರಾಜ್ಯ ಸರ್ಕಾರ ಅನುಷ್ಟಾನ ಮಾಡುವಲ್ಲಿ ವಿಫಲವಾಗಿದೆ. ಕಾಯ್ದೆಯ ಸೆಕ್ಷನ್ 26ರ ಪ್ರಕಾರ ವರ್ಷಕ್ಕೆ ಎರಡು ರಾಜ್ಯ ಮಟ್ಟದ ಸಭೆಗಳನ್ನು ಆಯೋಜನೆ ಮಾಡಿ, ಕಾಯ್ದೆಯಲ್ಲಿನ ನಿಯಮಗಳನ್ನು ಜಾರಿ ಮಾಡುವ ಕುರಿತಂತೆ ಪರಿಶೀಲನೆ ನಡೆಸಬೇಕು ಎಂಬುದಾಗಿ ತಿಳಿಸಲಾಗಿದೆ. ಆದರೆ, ಕಳೆದ ವರ್ಷದಿಂದ ಕೇವಲ ಒಂದು ಸಭೆಯನ್ನು ಮಾತ್ರ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಆರು ತಿಂಗಳು ಕಳೆದರೂ ಒಂದು ಸಭೆಯನ್ನೂ ನಡೆಸಿಲ್ಲ ಎಂದು ವಿವರಿಸಿದರು.