ಹಾವೇರಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದ ವೇಳೆ ತರಾತುರಿಯಲ್ಲಿ ಉದ್ಘಾಟನೆಗೊಂಡ ಬಂಕಾಪುರ ಪಟ್ಟಣದ ಜಿ ಪ್ಲಸ್ ಮನೆಗಳಲ್ಲಿ ವಿದ್ಯುತ್, ನೀರು ಮತ್ತು ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿ ವಾಸಿಸುತ್ತಿರುವ ಕುಟುಂಬಗಳು ಪರದಾಡುತ್ತಿವೆ. ಬಂಕಾಪುರ ಪಟ್ಟಣದಿಂದ ತಮ್ಮ ಮನೆಗಳಿಗೆ ನೀರು ತಂದು ಜೀವನ ಸಾಗಿಸುತ್ತಿವೆ. ಇನ್ನು ಬೀದಿ ದೀಪದ ಬೆಳಕಿನಲ್ಲಿ ಇವರ ರಾತ್ರಿಗಳು ಕಳೆಯುತ್ತಿವೆ. ಇತ್ತ ಶೌಚಾಲಯವಿಲ್ಲದೇ ನಿತ್ಯ ಬಹಿರ್ದೆಸೆಗೆ ಬಯಲಿಗೆ ಹೋಗುವುದು ಅನಿವಾರ್ಯವಾಗಿದೆ.
ಶಿಗ್ಗಾಂವಿ ತಾಲೂಕು ಬಂಕಾಪುರ ಪಟ್ಟಣದಲ್ಲಿ ನೂರಾರು ಬಡವರು ಸೂರಿಲ್ಲದ ನಿರಾಶ್ರಿತರಾಗಿದ್ದರು. ಚಳಿ, ಮಳೆಗಾಲ, ಬಿಸಿಲು ಎನ್ನದೇ ಗುಡಿಸಲು ಜೋಪಡಿಗಳಲ್ಲಿ ವಾಸವಾಗಿದ್ದರು. ಬಡವರ ಈ ಸ್ಥಿತಿ ನೋಡಿ, ಸರ್ಕಾರ ಸ್ವಂತ ಮನೆ ಮಾಡಿಸುವ ಯೋಜನೆಗೆ ಮುಂದಾಗಿತ್ತು. ಪುರಸಭೆಯ ಆಶ್ರಯ ಯೋಜನೆಯಲ್ಲಿ ಜಿ ಪ್ಲಸ್ ವನ್ ಯೋಜನೆಯಲ್ಲಿ ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡಲು ಪುರಸಭೆ ಮುಂದಾಗಿತ್ತು. ನಿರಾಶ್ರಿತರಿಂದ ಪುರಸಭೆ ನಲವತ್ತು ಸಾವಿರ ರೂಪಾಯಿ ವಂತಿಗೆ ಪಡೆದು ಜಿ ಪ್ಲಸ್ ಮನೆಗಳನ್ನು ನಿರ್ಮಾಣ ಮಾಡಿತ್ತು.
ನಗರದ ಹೊರವಲಯದ ಶಾಲೆಯ ಹತ್ತಿರ ಸುಮಾರು ಮುನ್ನೂರು ಮನೆಗಳನ್ನು ಅತ್ಯಂತ ಚುರುಕಾಗಿ ನಿರ್ಮಾಣ ಮಾಡಲಾಗಿತ್ತು. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮುತುವರ್ಜಿಯಿಂದ ಮನೆಗಳು ಸಹ ನಿರ್ಮಾಣಗೊಂಡವು. ಆದರೆ, ತರಾತುರಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದ ವೇಳೆ ಮುನ್ನೂರು ಮನೆಗಳ ಸಂಕೀರ್ಣಗಳನ್ನು ಉದ್ಘಾಟನೆ ಮಾಡಲಾಯಿತು. ಆದರೆ, ತರಾತುರಿಯಲ್ಲಿ ಉದ್ಘಾಟನೆಯಾದ ಕಾರಣ ಮನೆಗಳಿಗೆ ವಿದ್ಯುತ್, ನೀರು ಮತ್ತು ಶೌಚಾಲಯಗಳ ವ್ಯವಸ್ಥೆ ಪೂರ್ಣಗೊಂಡಿಲ್ಲ. ಹಾಗಾಗಿ ಅಧಿಕೃತವಾಗಿ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಿಲ್ಲ.
ಆದರೆ, ಕೆಲವು ಬಡವರು ಬಾಡಿಗೆ ಮನೆಯಲ್ಲಿ ಬಾಡಿಗೆ ಕಟ್ಟಲಾಗದೇ ಜಿ.ಪ್ಲಸ್ ಮನೆಗಳಲ್ಲಿ ಬಂದು ವಾಸಿಸಲಾರಂಭಿಸಿದ್ದಾರೆ. ಇವರಿಗೆ ವಿದ್ಯುತ್ ಶೌಚಾಲಯ ಸಮಸ್ಯೆ ಮಾತ್ರವಲ್ಲದೇ ಬಳಕೆಗೆ, ಕುಡಿಯಲು ನೀರು ಕೂಡ ದೂರದಿಂದ ತಂದು ಜೀವನ ನಡೆಸುವ ಪರಿಸ್ಥಿತಿ ಇದೆ. ವಿದ್ಯುತ್ ಇಲ್ಲದೇ ಬದುಕು ಸಾಗಿಸುವುದು ಕಷ್ಟವಾಗಿದೆ ಎನ್ನುತ್ತವೆ ಈ ಕುಟುಂಬಗಳು.