ಕರ್ನಾಟಕ

karnataka

ETV Bharat / state

ಹುಕ್ಕೇರಿ ಮಠ ಜಾತ್ರೆಯಲ್ಲಿ ಭಕ್ತರಿಗಾಗಿ ಖಡಕ್​ ರೊಟ್ಟಿ, ಗೋದಿ ಹುಗ್ಗಿ, ಕರ್ಚಿಕಾಯಿ; ತರಹೇವಾರಿ ಪಲ್ಯದ ಘಮಲು - HAVERI HUKKERIMATH FAIR

ಉತ್ತರ ಕರ್ನಾಟಕ ಪ್ರಸಿದ್ಧ ಹುಕ್ಕೇರಿಮಠದ ಜಾತ್ರೆಗಾಗಿ ತರಹೇವಾರಿ ಆಹಾರ ತಯಾರಿ ಭರದಿಂದ ಸಾಗಿದೆ. ಇದಕ್ಕಾಗಿ ಭಕ್ತರು ಎಲ್ಲಾ ಆಹಾರ ಪದಾರ್ಥಗಳನ್ನು ಮಠಕ್ಕೆ ನೀಡಿದ್ದು, ಸ್ತ್ರೀ ಸಂಘಟನೆಗಳ ಸದಸ್ಯರು ಸ್ವಯಂಪ್ರೇರಿತರಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

HAVERI HUKKERIMATH FAIR
ಹಾವೇರಿ ಹುಕ್ಕೇರಿ ಮಠದ ಜಾತ್ರೆ (ETV Bharat)

By ETV Bharat Karnataka Team

Published : Jan 8, 2025, 8:41 PM IST

ಹಾವೇರಿ : ಏಲಕ್ಕಿ ಕಂಪಿನ ನಗರಿ ಹಾವೇರಿಗೆ ಎರಡನೇಯ ಕಲ್ಯಾಣ ಎಂಬ ಹೆಸರು ಸಹ ಇದೆ. ಇದಕ್ಕೆ ಕಾರಣ ಬಸವಣ್ಣನವರ ಕಲ್ಯಾಣದಲ್ಲಿ 64 ಮಠಗಳಿದ್ದರೆ, ಹಾವೇರಿ ನಗರದಲ್ಲಿ 63 ಮಠಗಳಿವೆ. ಈ ಮಠಗಳಲ್ಲಿ ಪ್ರಮುಖವಾದ ಹುಕ್ಕೇರಿಮಠದ ಜಾತ್ರೆ ಆರಂಭವಾಗಿದೆ. ಈ ಜಾತ್ರೆ ಆರಂಭದೊಂದಿಗೆ ಉತ್ತರ ಕರ್ನಾಟಕದ ಜಾತ್ರೆಗಳು ಆರಂಭವಾಗುತ್ತವೆ. ಈ ಮಠದ ಜಾತ್ರೆಗೆ ಜಾತ್ರೆಗಳ ಆರಂಭಿಕ ಜಾತ್ರೆ ಎಂದು ಸಹ ಕರೆಯಲಾಗುತ್ತದೆ. ಐದು ದಿನಗಳ ಕಾಲ ಈ ಮಠದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಕಾರ್ಯಕ್ರಮಗಳು ಜರುಗುತ್ತವೆ.

ಭಕ್ತರಿಗಾಗಿ ತರಹೇವಾರಿ ಆಹಾರ ತಯಾರಿ; ಇಲ್ಲಿಗೆ ಬರುವ ಭಕ್ತರಿಗಾಗಿ ಮಠದಲ್ಲಿ ವೈವಿಧ್ಯಮಯ ಆಹಾರ ಸಿದ್ಧಪಡಿಸಲಾಗುತ್ತಿದೆ. ಐದು ದಿನಗಳ ಕಾಲ ಮತ್ತು ಕೊನೆಯ ಎರಡು ದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಮಠಕ್ಕೆ ಬರುವ ಭಕ್ತರ ಹಸಿವು ನೀಗಿಸಲು ಭಕ್ಷ್ಯಭೋಜನಗಳನ್ನು ಸಿದ್ಧಪಡಿಸಲಾಗುತ್ತದೆ. ಮುಂಜಾನೆಯ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಉತ್ತರ ಕರ್ನಾಟಕದ ತಿನಿಸುಗಳನ್ನು ಸಿದ್ಧಪಡಿಸಲಾಗುತ್ತದೆ. ಅದರಲ್ಲೂ ಖಡಕ್ ರೊಟ್ಟಿ, ಚಪಾತಿ, ಬದನೆಕಾಯಿ ಎಣಗಾಯಿ, ಕಾಳುಗಳ ಪಲ್ಯೆ ಜೊತೆಗೆ ಬೂಂದಿ, ಗೋಧಿಹುಗ್ಗಿ, ಮಾದಲಿ, ಕರ್ಚಿಕಾಯಿ ಸೇರಿದಂತೆ ವಿವಿಧ ಸಿಹಿತಿನಿಸುಗಳನ್ನು ತಯಾರಿಸಲಾಗುತ್ತಿದೆ.

ಜಾತ್ರೆಯ ದಾಸೋಹದ ಕುರಿತು ಸಮಿತಿ ಸದಸ್ಯರು ಮಾತನಾಡಿದರು (ETV Bharat)

ಭಕ್ತರಿಂದಲೇ ದಾಸೋಹಕ್ಕೆ ತರಕಾರಿ, ಕಿರಾಣಿ ಪೂರೈಕೆ; ಹಾವೇರಿ ನಗರದ ವಿವಿಧ ಮಹಿಳಾ ಸಂಘಟನೆಗಳ ಸ್ತ್ರೀಯರು ಸ್ವಯಂಪ್ರೇರಿತರಾಗಿ ಮಠಕ್ಕೆ ಬಂದು ಕರ್ಚಿಕಾಯಿ ಸೇರಿದಂತೆ ರೊಟ್ಟಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಪ್ರತಿನಿತ್ಯ ಸಾವಿರಾರು ಭಕ್ತರು ದಾಸೋಹ ಸ್ವೀಕರಿಸಿದರೆ ಕೊನೆಯ ಎರಡು ದಿನ ಲಕ್ಷಾಂತರ ಭಕ್ತರು ದಾಸೋಹದಲ್ಲಿ ಪ್ರಸಾದ ಸ್ವೀಕರಿಸಲಿದ್ದಾರೆ. ಮತ್ತೊಂದು ವಿಶೇಷ ಅಂದರೆ ಭಕ್ತರೇ ಮಠಕ್ಕೆ ಎಲ್ಲ ತರಕಾರಿ, ಕಿರಾಣಿ ತಂದು ನೀಡುತ್ತಾರೆ. ದಾಸೋಹ ಸಮಿತಿ ಬಂದ ವಸ್ತುಗಳಿಂದ ಆಹಾರ ತಯಾರಿಸಿ ಭಕ್ತರಿಗೆ ಉಣಬಡಿಸುತ್ತೆ.

ಜಾತ್ರೆಗೆ ಕರ್ಚಿಕಾಯಿ ತಯಾರಿಸುತ್ತಿರುವ ಮಹಿಳೆಯರು (ETV Bharat)

ಮಠದ ಲಿಂಗೈಕ್ಯ ಶ್ರೀಗಳಾದ ಶಿವಬಸವಶ್ರೀ ಮತ್ತು ಶಿವಲಿಂಗಶ್ರೀಗಳ ಪುಣ್ಯಾರಾಧನೆಯನ್ನೇ ಇಲ್ಲಿ ಜಾತ್ರೆಯಾಗಿ ಆಚರಿಸಲಾಗುತ್ತದೆ. ಉಭಯಶ್ರೀಗಳ ಭಾವಚಿತ್ರವನ್ನು ಜಾತ್ರೆಯ ಕೊನೆಯ ದಿನ ಉತ್ಸವ ನಡೆಸಲಾಗುತ್ತದೆ. ಜಾತ್ರೆ ಅಂಗವಾಗಿ ಮಠದಲ್ಲಿ ಉಭಯಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿದೆ. ಹುಕ್ಕೇರಿಮಠಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿದ್ದು ದೀಪಾಲಂಕಾರದಲ್ಲಿ ಹುಕ್ಕೇರಿಮಠ ಕಂಗೊಳಿಸುತ್ತದೆ.

ಭಕ್ತರಿಗಾಗಿ ಕರ್ಚಿಕಾಯಿ ಖಾದ್ಯ (ETV Bharat)

ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಖಡಕ್​ ರೊಟ್ಟಿ ಮಾಡಿಕೊಂಡು ಬಂದು ಮಠಕ್ಕೆ ನೀಡುತ್ತಿದ್ದಾರೆ. ಪ್ರಸ್ತುತ ಸದಾಶಿವಶ್ರೀಗಳು ಮಠದ ಪೀಠಾಧಿಪತಿಗಳಾಗಿದ್ದು ಮಠ ಸರ್ವರಂಗದಲ್ಲಿ ಮುಂಚೂಣಿಯಲ್ಲಿದೆ.

ಮಠದಲ್ಲಿ ಊಟ ಸವಿಯುತ್ತಿರುವ ಭಕ್ತರು (ETV Bharat)

ಇದನ್ನೂ ಓದಿ: ಹಾವೇರಿ: ಹುಕ್ಕೇರಿಮಠದ ಜಾನುವಾರು ಜಾತ್ರೆಗೆ ಚಾಲನೆ, ರಾಸುಗಳಿಗೆ ಚರ್ಮಗಂಟು ರೋಗದ ಲಸಿಕೆ

ABOUT THE AUTHOR

...view details