ಹಾವೇರಿ: ಶ್ವಾನ ಸಾಕಾಣಿಕೆ ಪ್ರಕರಣವೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ಗ್ರಾಮದ ರಾಕೇಶ್ ಬಾರಂಗಿ ಎಂಬವರು ಕೆಲ ತಿಂಗಳ ಹಿಂದೆ ಜರ್ಮನ್ ಶೆಫರ್ಡ್ ಜಾತಿಯ ಎರಡು ನಾಯಿಮರಿಗಳನ್ನು ತಮ್ಮ ಗೆಳೆಯನಿಂದ ಪಡೆದಿದ್ದರು. ಅವುಗಳಿಗೆ ರಾಕ್ಷಿ ಮತ್ತು ಬ್ಲಾಕಿ ಎಂದು ಹೆಸರಿಟ್ಟು ಸಾಕುತ್ತಿದ್ದರು.
ಆದರೆ, ಚಿನ್ನಮುಳಗುಂದ ಗ್ರಾಮದಲ್ಲಿ ಚಿರತೆ ಕಾಟ ಶುರುವಾಯಿತು. ಹಾಗಾಗಿ, ರಾಕೇಶ್ ತಮ್ಮ ನಾಯಿಮರಿಗಳನ್ನು ಮತ್ತೊಬ್ಬ ಸ್ನೇಹಿತ ಹಾವೇರಿಯ ಮದನ ಎಂಬವರಿಗೆ ಸಾಕಲು ಕೊಟ್ಟರು. ಚಿರತೆ ಸಮಸ್ಯೆ ಮುಗಿಯುವವರೆಗೆ ಈ ಶ್ವಾನಗಳನ್ನು ಸಾಕು ಎಂದು ತಿಳಿಸಿದ್ದರು.
ಎರಡು ಶ್ವಾನಗಳನ್ನು ಪಡೆದ ಮದನ ಕೆಲ ದಿನಗಳ ಕಾಲ ಸಾಕಿ ಸಲಹಿದರು. ಬಳಿಕ ಅವೆರಡೂ ಶ್ವಾನಗಳನ್ನು ಸಾಕುವುದು ಕಷ್ಟ ಎಂದು ತಿಳಿದ ಮದನ, ತಮ್ಮ ಪರಿಚಿತ ಶ್ವಾನಪ್ರಿಯ ಸವಣೂರು ತಾಲೂಕಿನ ಯಲವಿಗಿ ಗ್ರಾಮದ ಚಂದ್ರಶೇಖರ್ ಎಂಬವರಿಗೆ ನೀಡಿದರು. ಕಳೆದ ಕೆಲ ಸಮಯದಿಂದ ಈ ಶ್ವಾನಗಳನ್ನು ಚಂದ್ರಶೇಖರ್ ಅವರು ಸಾಕುತ್ತಿದ್ದರು. ಅವುಗಳಿಗೆ ರಕ್ಷಿತಾ ಮತ್ತು ರಾಣಾ ಎಂದು ಹೆಸರಿಟ್ಟಿದ್ದರು. ಚಂದ್ರಶೇಖರ್‌ಗೆ ಈ ಶ್ವಾನಗಳು ರಾಕೇಶ್ ಅವರದ್ದು ಎಂಬುದು ಗೊತ್ತಿರಲಿಲ್ಲ. ಆದರೆ, ಅವುಗಳನ್ನು ಕಳೆದ 90 ದಿನಗಳಿಂದ ಸ್ವಂತ ಮಕ್ಕಳಂತೆ ಸಾಕಿದ್ದರು.
ಈ ಮಧ್ಯೆ ರಾಕೇಶ್ ಬಾರಂಗಿ ತಮ್ಮ ಶ್ವಾನಗಳನ್ನು ವಾಪಸ್ ನೀಡುವಂತೆ ಮದನ್‌ಗೆ ದುಂಬಾಲು ಬಿದ್ದಿದ್ದಾರೆ. ರಾಕೇಶ್‌ನನ್ನು ಕರೆದುಕೊಂಡು ಬಂದ ಮದನ್, ಶ್ವಾನಗಳು ಚಂದ್ರಶೇಖರ್ ಬಳಿ ಇರುವುದನ್ನು ತೋರಿಸಿದ್ದಾರೆ. ಈ ಮಧ್ಯೆ ರಾಕೇಶ್ ಶ್ವಾನಗಳನ್ನು ಕೊಡಿಸುವಂತೆ ಮದನ್‌ಗೆ ಒತ್ತಾಯ ಮಾಡಿದ್ದಾರೆ. ಇಬ್ಬರ ನಡುವೆ ಮನಸ್ತಾಪವಾಗಿದೆ. ಇದರಿಂದ ಕುಪಿತನಾದ ರಾಕೇಶ್, ಹಾವೇರಿ ಶಹರ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ಶ್ವಾನಗಳು ಕಳ್ಳತನವಾಗಿದ್ದು, ಅವುಗಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಆಲಿಸಿದ ಹಾವೇರಿ ಶಹರ ಸಿಪಿಐ ಮೋತಿಲಾಲ್ ಪವಾರ್, ಪ್ರಕರಣ ದಾಖಲಿಸಿಕೊಳ್ಳದೇ ಸುಖಾಂತ್ಯಗೊಳಿಸಲು ಮುಂದಾದರು.