ಹಾವೇರಿ:ಜಿಲ್ಲೆಯ ಸವಣೂರು ತಾಲೂಕಿನ ಹುರುಳಿಕೊಪ್ಪಿ ಗ್ರಾಮದ ಪ್ರಕಾಶ್ ಬಾರ್ಕಿ ಇದೀಗ ವಾಟರ್ಮ್ಯಾನ್ ಎಂತಲೇ ಪ್ರಸಿದ್ಧಿ. ಇದಕ್ಕೆ ಕಾರಣ ಇವರು ತಮ್ಮ ಹೊಲದಲ್ಲಿ ಸಾರ್ವಜನಿಕರಿಗೆ ಮತ್ತು ಪ್ರಾಣಿಪಕ್ಷಿಗಳಿಗೆ ಮಾಡಿರುವ ನೀರಿನ ವ್ಯವಸ್ಥೆ.
ಪ್ರಕಾಶ್ ನೀರಿನ ತೊಟ್ಟಿ ಮಾಡಿ ಜನ ಜಾನುವಾರು ಕಾಡುಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ. ತಮ್ಮ ಜಮೀನಲ್ಲಿ 5 ಅಡಿ ಅಗಲ 30 ಅಡಿ ಉದ್ದದ ತೊಟ್ಟಿ ನಿರ್ಮಾಣ ಮಾಡಿದ್ದು, ಅದಕ್ಕೆ ಟಾರ್ಪಲ್ (ತಾಡಪತ್ರಿ)ಹಾಕಿ ಜಮೀನಿನಲ್ಲಿನ ಕೊಳವೆ ಬಾವಿಯಿಂದ ಪ್ರಕಾಶ ನೀರು ಪೂರೈಸುತ್ತಿದ್ದಾರೆ. ಪ್ರಕಾಶ ಬಾರ್ಕಿ ನಿರ್ಮಿಸಿರುವ ಈ ನೀರಿನ ತೊಟ್ಟಿ ಸುತ್ತಮುತ್ತ ಸುಮಾರು ಎರಡು ಕಿಲೋ ಮೀಟರ್ ಯಾವುದೇ ನೀರಿನ ಮೂಲಗಳಿಲ್ಲಾ. ಇದ್ದ ಹೊಂಡ, ಹಳ್ಳ-ಕೊಳ್ಳಗಳು, ನದಿಗಳು, ಕೆರೆ ಬಾವಿ ಕೆಲ ಕೊಳವೆಬಾವಿಗಳು ಸಹ ನೀರಿಲ್ಲದ ಬತ್ತಿವೆ.
ಹೀಗಾಗಿ ಜನರಿಗೆ ಪ್ರಕಾಶ್ ನಿರ್ಮಾಣ ಮಾಡಿರುವ ನೀರಿನ ತೊಟ್ಟಿಯೇ ನೀರಿನ ದಾಹ ತೀರಿಸುತ್ತಿದೆ. ಹುರುಳಿಕೊಪ್ಪಿ, ತೊಂಡೂರು ಕಳಲಕೊಂಡ, ತಳ್ಳಳ್ಳಿ, ಹೊಸಳ್ಳಿ ಗ್ರಾಮಗಳ ಕುರಿಗಾಹಿಗಳು ಈ ತೊಟ್ಟಿಯಲ್ಲಿ ಕುರಿಗಳಿಗೆ ನೀರು ಕುಡಿಸುತ್ತಾರೆ. ಜೊತೆಗೆ ಕೊಳವೆಬಾವಿ ನೀರು ಸಿಹಿಯಾಗಿರುವ ಕಾರಣ ಜನರು ಸಹ ಇಲ್ಲಿಯ ನೀರನ್ನು ತುಂಬಿಕೊಳ್ಳುತ್ತಾರೆ. ಜಮೀನಿಗೆ ಬರುವ ಎತ್ತು, ಆಕಳುಗಳು ಇಲ್ಲಿಯೇ ನೀರಿನ ದಾಹ ನೀಗಿಸಿಕೊಳ್ಳುತ್ತವೆ. ಹಗಲು ವೇಳೆ ಜನರು ಅವರ ಸಾಕು ಪ್ರಾಣಿಗಳು ನೀರಿನ ದಾಹ ತೀರಿಸಿಕೊಂಡರೆ ರಾತ್ರಿ ಕಾಡುಪ್ರಾಣಿಗಳು ನೀರು ಕುಡಿಯುತ್ತವೆ. ತೋಳಗಳು, ನರಿ, ಮೊಲಗಳು ಮುಂಜಾನೆ ನವಿಲುಗಳು ಪ್ರಕಾಶ್ ನಿರ್ಮಿಸಿರುವ ನೀರಿನ ತೊಟ್ಟಿಯಲ್ಲಿ ನೀರು ಸೇವಿಸುತ್ತವೆ.