ಹಾಸನ:"ಐತಿಹಾಸಿಕ ಗೆಲುವಿನ ನಡುವೆ ಜವಾಬ್ದಾರಿ ಹೆಚ್ಚಿದೆ. ನನ್ನ ಮೇಲೆ ನಂಬಿಕೆ ಇಟ್ಟು ಮತ ಹಾಕಿರುವ ಜನರ ಋಣವನ್ನು ಪ್ರಾಮಾಣಿಕವಾಗಿ ಜಿಲ್ಲೆಯ ಅಭಿವೃದ್ಧಿ ಮಾಡುವ ಮೂಲಕ ತೀರಿಸುತ್ತೇನೆ" ಎಂದು ಹಾಸನ ಲೋಕಸಭಾ ಕ್ಷೇತ್ರದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹೇಳಿದರು.
ಗೆಲುವಿನ ಬಳಿಕ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಪ್ರಚಾರದ ಸಂದರ್ಭದಲ್ಲಿ ನಾನು ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ನೆನೆಗುದಿಗೆ ಬಿದ್ದಿರುವ ಹಲವು ಯೋಜನೆಗಳನ್ನು ಲೋಕಸಭೆಯಲ್ಲಿ ಚರ್ಚಿಸುವ ಮೂಲಕ ಕೇಂದ್ರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ. ನನ್ನ ಗೆಲುವಿಗೆ ಸಹಕರಿಸಿದ ಕಾರ್ಯಕರ್ತರು ಮತ್ತು ಪಕ್ಷಾತೀತವಾಗಿ ಬೆಂಬಲಿಸಿದ ಹಲವು ಮುಖಂಡರಿಗೆ ಚಿರಋಣಿ" ಎಂದರು.
"ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಹಾಸನಕ್ಕೆ ಆಗಮಿಸಿ ನನ್ನ ಪರ ಪ್ರಚಾರ ಮಾಡಿದರು. ಇದೂ ಕೂಡ ಗೆಲುವಿಗೆ ಸಹಕಾರಿಯಾಯಿತು. ಇದು ನನ್ನ ಗೆಲುವಲ್ಲ, ಕಾರ್ಯಕರ್ತರ ಗೆಲುವು. ನನ್ನ ಗೆಲುವನ್ನು ಅವರಿಗೆ ಅರ್ಪಿಸುತ್ತೇನೆ" ಎಂದು ಹೇಳಿದರು.