ಕರ್ನಾಟಕ

karnataka

ETV Bharat / state

'ದೆಹಲಿಗೆ ಯಾತ್ರೆ ಹೊರಟಿರುವ ರಾಜ್ಯ ಕಾಂಗ್ರೆಸ್ ಪಕ್ಷದ ಎರಡು ತಲೆ ರಾಜಕಾರಣ ಈಗ ಬೆತ್ತಲಾಗಿದೆ' : ಹೆಚ್​​ಡಿಕೆ ಕಿಡಿ - H D Kumaraswamy

ದೆಹಲಿಗೆ ಯಾತ್ರೆ ಹೊರಟಿರುವ ರಾಜ್ಯ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ (ಫೋಟೋ ಕೃಪೆ ಟ್ವಿಟ್ಟರ್​)
ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ (ಫೋಟೋ ಕೃಪೆ ಟ್ವಿಟ್ಟರ್​)

By ETV Bharat Karnataka Team

Published : Feb 6, 2024, 7:31 PM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ತೆರಿಗೆ ಪಾಲು, ಅನುದಾನದಲ್ಲಿ ಅನ್ಯಾಯವಾಗಿದೆ ಎಂದು ದೆಹಲಿಗೆ ಯಾತ್ರೆ ಹೊರಟಿರುವ ರಾಜ್ಯ ಕಾಂಗ್ರೆಸ್ ಪಕ್ಷದ ಎರಡು ತಲೆ ರಾಜಕಾರಣ ಈಗ ಬೆತ್ತಲಾಗಿದೆ. ಅದರ ವರಸೆ ಹೇಗಿದೆ ಎಂದರೆ., ಕರ್ನಾಟಕಕ್ಕೆ ಒಂದು ನೀತಿ, ಕೇರಳಕ್ಕೆ ಮತ್ತೊಂದು ನೀತಿ! ಉದ್ದೇಶ: ಲೋಕಸಭೆ ಚುನಾವಣೆ!!' ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಎಕ್ಸ್​ (ಟ್ವಿಟ್​)ನಲ್ಲಿ ವ್ಯಂಗ್ಯವಾಡಿದ್ದಾರೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, "ನಮ್ಮ ರಾಜ್ಯಕ್ಕೆ ತೆರಿಗೆ ಪಾಲು, ಅನುದಾನದಲ್ಲಿ ಅನ್ಯಾಯ ಆಗಿದೆ. ಅದಕ್ಕೆ ಕೇಂದ್ರದ ವಿರುದ್ಧ ದನಿ ಎತ್ತೋಣ ಬನ್ನಿ, ಸಹಕಾರ ನೀಡಿ" ಎಂದು ಕರೆದರೆ, ಅದಕ್ಕೆ ಕೇರಳ ಕಾಂಗ್ರೆಸ್ಸಿಗರು ಕೊಟ್ಟ ಉತ್ತರ ಹೀಗಿತ್ತು; "ಜನರ ಹಣವನ್ನು ನೀವು ಅನಗತ್ಯ ವೆಚ್ಚಗಳಿಗೆ ಪೋಲು ಮಾಡುತ್ತಿದ್ದೀರಿ, ನಾವು ಬರಲ್ಲ" ಎಂದಿದ್ದಾರೆ!!.

ವಿಜಯನ್ ಅವರು ಕರೆದಿದ್ದ ಸರ್ವಪಕ್ಷ ಸಭೆಗೂ ಅಸಹಕಾರ ತೋರಿರುವ ಕಾಂಗ್ರೆಸ್ಸಿಗರು, ಕೇಂದ್ರ ಸರ್ಕಾರದ ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವಾಗಲೂ ಗೈರು ಹಾಜರಾಗಿದ್ದಾರೆ ಮತ್ತು ಕಲಾಪವನ್ನೇ ಬಹಿಷ್ಕರಿಸಿದ್ದಾರೆ. ಅಷ್ಟೇ ಅಲ್ಲ; ಫೆಬ್ರುವರಿ 8ನೇ ತಾರೀಖು ದಿಲ್ಲಿಯಲ್ಲಿ ವಿಜಯನ್ ಅವರು ಹಮ್ಮಿಕೊಂಡಿರುವ ಪ್ರತಿಭಟನೆಯನ್ನೂ ಕೇರಳ ಕಾಂಗ್ರೆಸ್ಸಿಗರು ಬಹಿಷ್ಕರಿಸಿದ್ದಾರೆ!!. ಆದರೆ, ಕರ್ನಾಟಕದ ಕಾಂಗ್ರೆಸ್, ಕೇರಳಕ್ಕೆ ತದ್ವಿರುದ್ಧ ದಿಕ್ಕಿನಲ್ಲಿದೆ. ಒಂದೆಡೆ ರಾಜ್ಯ ಬಿಜೆಪಿ ಸಂಸದರು ಶೋ ಪೀಸುಗಳು, ಗಂಡಸ್ತನ ಇಲ್ಲದವರು ಎಂದು ಕಾಂಗ್ರೆಸ್ ನಾಯಕರು ನಾಲಿಗೆ ಜಾರಿ ಬಿಡುತ್ತಿದ್ದಾರೆ. ಈಗ ನೋಡಿದರೆ, "ಪ್ರತಿಭಟನೆಗೆ ಬನ್ನಿ. ನಿಮ್ಮ ಸಹಕಾರವೂ ಇರಲಿ.." ಎಂದು ಆ ಪಕ್ಷದ ಸಂಸದರನ್ನು ಅದೇ ನಾಲಿಗೆಯಿಂದಲೇ ಕರೆಯುತ್ತಿದ್ದಾರೆ. ಜೆಡಿಎಸ್ ಸಂಸದರಿಗೂ ಪತ್ರ ಬರೆದಿದ್ದಾರೆ. ಇದೆಂಥಾ ವೈರುಧ್ಯ? ಇದೆಂಥಾ ಚೋದ್ಯ? ಎಂದು ಎಕ್ಸ್​ನಲ್ಲಿ ಟೀಕಿಸಿದ್ದಾರೆ.

ಕೇರಳದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಸರ್ಕಾರ ಜನರ ತೆರಿಗೆ ಹಣ ಪೋಲು ಮಾಡುತ್ತಿದೆ ಎಂದಾದರೆ, ಕರ್ನಾಟಕದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಮಾಡುತ್ತಿರುವುದೇನು? ಯೋಜನೆಗಳ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿರುವುದೇನು?. ಕೇರಳದಲ್ಲಿ ಅಸಹಕಾರ! ಕರ್ನಾಟಕದಲ್ಲಿ ಸಹಕಾರ!! ಇದೆಂಥಾ ನೀತಿ? ಎರಡು ತಲೆಗಳು ಮಾತ್ರವಲ್ಲ, ರಾವಣ ತಲೆಗಳ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಮೈಯೆಲ್ಲಾ ರಾಜಕೀಯವೇ ತುಂಬಿದೆ. ಅದೂ ಸ್ವಾರ್ಥ ರಾಜಕೀಯ ಎಂದು ಮಾಜಿ ಸಿಎಂ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ: ಸಿಎಂ ಸೇರಿ ನಾಲ್ವರಿಗೆ ತಲಾ 10 ಸಾವಿರ ರೂ. ದಂಡ

ABOUT THE AUTHOR

...view details