ತುಮಕೂರು:ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ತುರುವೇಕೆರೆ ಪಟ್ಟಣದಲ್ಲಿ ವಿ.ಸೋಮಣ್ಣ ಪರ ಬಹಿರಂಗ ಪ್ರಚಾರ ವೇಳೆ ಮಾತನಾಡಿದ ಅವರು, ಗ್ಯಾರಂಟಿಗಾಗಿ ಯಾರ ಜೇಬಿಗೆ ಕೈ ಹಾಕಿದ್ದಾರೆ. ಹೆಣ್ಣುಮಕ್ಕಳು ಗಮನ ಇಟ್ಟು ಎರಡು ಮಾತುಗಳನ್ನು ಕೇಳಬೇಕು. ಇವತ್ತಿನ ಸರ್ಕಾರ ಕಳೆದ ಚುನಾವಣೆಯಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿ, ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ. ಅವರ ಬದುಕು ಏನಾಗಿದೆ ಎನ್ನುವುದನ್ನು ಯೋಚನೆ ಮಾಡಬೇಕಿದೆ ಎಂದು ತಿಳಿಸಿದರು.
ನಿಮ್ಮ ಕುಟುಂಬದ ಬದುಕೇನಾಗಬೇಕು ಎಂಬುದನ್ನು ಯೋಚನೆ ಮಾಡಬೇಕಿದೆ. ಅವರಿಗೆ ಐದು ಗ್ಯಾರಂಟಿ ಬಿಟ್ಟು ಬೇರೆನಿಲ್ಲಾ. ಐದು ಗ್ಯಾರಂಟಿ ಪ್ರಚಾರಕ್ಕಾಗಿ ಫೋಟೋ ಹಾಕಿಕೊಂಡು ಎಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಎಂದು ಪ್ರತಿದಿನ ದಿನಪತ್ರಿಕೆ ನೋಡಿದ್ರೆ ನಿಮಗೆ ಗೊತ್ತಾಗುತ್ತೆ. ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಮುನ್ನೂರು ಕೋಟಿಗಿಂತ ಹೆಚ್ಚು ಹಣವನ್ನು ಪತ್ರಿಕೆಗಳಲ್ಲಿ ಜಾಹೀರಾತು ಹಾಕುವುದಕ್ಕೆ ಖರ್ಚು ಮಾಡಿದ್ದು ಆ ದುಡ್ಡು ಸಹ ನಿಮ್ಮದೇ? ಕಾಂಗ್ರೆಸ್ ಕಚೇರಿಯಿಂದ ಹಾಕಿರುವ ದುಡ್ಡು ಅಲ್ಲ ಎಂದು ಕಿಡಿಕಾರಿದರು.