ಕರ್ನಾಟಕ

karnataka

ETV Bharat / state

ಸುಳ್ಳು ಲೆಕ್ಕ ಕೊಟ್ಟು ಜನರ ತೆರಿಗೆ ಹಣದಲ್ಲಿ ಪುಕ್ಕಟೆ ಪ್ರಚಾರ ಪಡೆಯುವ ಕಾಂಗ್ರೆಸ್‌: ಹೆಚ್‌ಡಿಕೆ - JDS

ಜನರ ತೆರಿಗೆ ಹಣದಲ್ಲಿ ರಾಜ್ಯ ಕಾಂಗ್ರೆಸ್​ ​ಪ್ರಚಾರ ಮಾಡುತ್ತಿದೆ ಎಂದು ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರಸ್ವಾಮಿ ಟೀಕಾಸಮರ ನಡೆಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
ರಾಜ್ಯ ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ

By ETV Bharat Karnataka Team

Published : Feb 5, 2024, 5:48 PM IST

ಬೆಂಗಳೂರು: ಅನ್ನಭಾಗ್ಯ, ಗೃಹಲಕ್ಷ್ಮೀ ಹೆಸರಿನಲ್ಲಿ ಲೋಕೋದ್ಧಾರ ಮಾಡಿದ್ದೇವೆ ಎಂದು ಸುಳ್ಳು ಲೆಕ್ಕ ಕೊಟ್ಟು ಜನರ ತೆರಿಗೆ ಹಣದಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿರುವ ನಿಮ್ಮ ಲೊಳಲೊಟ್ಟೆ ಬಯಲಾಗಿದೆ ಸಿದ್ದರಾಮಯ್ಯನವರೇ. ನುಡಿದಂತೆ ನಡೆದಿದ್ದೇವೆ ಎಂದರೆ ಇದೇನಾ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಗ್ಯಾರಂಟಿಗಳ ಮೂಲಕವೇ ಗತಿಗೆಟ್ಟ ಕಾಂಗ್ರೆಸ್ ಪಕ್ಷದ ಹೊಟ್ಟೆ ಹೊರೆಯುತ್ತಿರುವ ಮತಿಗೆಟ್ಟ ನಿಮ್ಮ ಸರಕಾರವು ಕಲ್ಯಾಣ ಕಾರ್ಯಕ್ರಮಗಳ ಕಪಟ ಪೋಷಾಕಿನಿಂದ ಮೆರೆಯುತ್ತಿದೆ. ಆ ಪೋಷಾಕು, ನಿಮ್ಮ ಢೋಂಗಿಧೀರತ್ವದ ಮುಖವಾಡ ಕಳಚಿ ನೆಲಕ್ಕೆ ಬಿದ್ದಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಟೀಕಿಸಿದ್ದಾರೆ.

ಅಧಿಕಾರದ ಮದವೇರಿ ಮಂಪರು ಬಿದ್ದಿರುವ ನಿಮ್ಮ ಕಂಗಳು ಆ ನತದೃಷ್ಟನ ಪ್ರಾಣಾರ್ಪಣೆಯಿಂದಲಾದರೂ ತೆರೆದುಕೊಳ್ಳಲಿ. ಇಲ್ಲವಾದರೆ, ಆ ಯುವಕನ ಸಾವಿನ ಶಾಪ ನಿಮಗೆ ತಟ್ಟದೇ ಬಿಡದು. ಎಲ್ಲಿದ್ದಾಳೆ ನಿಮ್ಮ ಗೃಹಲಕ್ಷ್ಮೀ? ಯಾರಿಗೆ ಸಿಕ್ಕಿದೆ ನಿಮ್ಮ ಅನ್ನಭಾಗ್ಯ? ನಾಚಿಕೆ, ಸಂಕೋಚ ಎನ್ನುವುದಿಲ್ಲವೇ? ಇದ್ದರೆ ಈ ಧಾರುಣಕ್ಕೆ ರಾಜ್ಯ ಸಾಕ್ಷಿಯಾಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.

ದುಡಿದು ತಾಯಿಯನ್ನು ಸಲಹಬೇಕೆಂದು ಕನಸು ಕಟ್ಟಿಕೊಂಡು ಹೊರಟ ಹಾವೇರಿ ಜಿಲ್ಲೆ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ ಎಂಬ ಯುವಕನ ಆತ್ಮಾಹುತಿ ಆಘಾತಕಾರಿ. ನಿಮ್ಮ ಪ್ರಚಾರಪ್ರಿಯ, ಖೊಟ್ಟಿ ಗ್ಯಾರಂಟಿಗಳ ಸರಕಾರದ ಆತ್ಮಸಾಕ್ಷಿಗೆ ಎದುರಾದ ದೊಡ್ಡ ಸವಾಲು ಎಂದು ಹೇಳಿದ್ದಾರೆ. ಟಿಕೆಟ್ ಇಲ್ಲದೆ ರೈಲಿನಿಂದ ಹೊರದಬ್ಬಿಸಿಕೊಂಡ ಈತ, ಧಾರವಾಡ ಆಳ್ನಾವರದಲ್ಲಿ ಹೆತ್ತಮ್ಮಗೆ ಅನ್ನ ಅರಸುತ್ತಾ, ದುಡಿಮೆ ಹುಡುಕುತ್ತಾ ಹೊರಟ. ಎಲ್ಲಿಯೂ ಅವಕಾಶ ಸಿಗದೆ ಕೈಚೆಲ್ಲಿ ನೇಣಿಗೆ ಕೊರಳು ಒಡ್ಡಿದ್ದಾನೆ. ಮೂರು ನಾಲ್ಕು ದಿನ ತಾಯಿ ಮಗ ಇಬ್ಬರೂ ಅನ್ನಕ್ಕಾಗಿ ಪರಿತಪಿಸಿದ್ದಾರೆ. ಈ ತಾಯಿಯ ಕುಟುಂಬಕ್ಕೆ ಅನ್ನಭಾಗ್ಯ ಏಕೆ ತಲುಪಿಲ್ಲ? ಗೃಹಲಕ್ಷ್ಮೀ ಅವರ ಮನೆ ಬಾಗಿಲಿಗೆ ಹೋಗಿಲ್ಲವೇಕೆ? ಇದಕ್ಕೆ ನೀವೇ ಹೊಣೆ ಸಿದ್ದರಾಮಯ್ಯನವರೇ. 15ನೇ ಬಜೆಟ್ ಮಂಡಿಸುವ ಉಮೇದಿನಲ್ಲಿರುವ ನೀವು ಈ 'ಸತ್ತ ಸರಕಾರದ ಸಾಹುಕಾರ'ನಷ್ಟೇ. ನಿಮ್ಮ ಸೋಗಲಾಡಿ ಸಮಾಜವಾದ ಬೆತ್ತಲಾಗಿದೆ. ಅನ್ನಕ್ಕಾಗಿ ಸಂಭವಿಸಿದ ಈ ಆತ್ಮಹತ್ಯೆ ಇಡೀ ನಾಡಿಗೇ ಕಪ್ಪುಚುಕ್ಕೆ ಎಂದು ಕಿಡಿಕಾರಿದ್ದಾರೆ.

ಪತ್ರಿಕೆಯೊಂದರ ವರದಿ ನಿಮ್ಮ ಸರಕಾರ ಮತ್ತು ನಿಮ್ಮನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ಸ್ವತಃ ನೀವೇ ಈ ಯುವಕನ ಸಾವಿಗೆ ಕಾರಣ ಮತ್ತು ನೇರ ಹೊಣೆ. ರಾಜ್ಯಕ್ಕೆ ನೀವೇ ಸಮಜಾಯಿಷಿ ಕೊಡಬೇಕು ಹಾಗೂ ಶಾಂತವ್ವನಿಗೆ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೊಂದು ಸಲಹೆ; ಹಳ್ಳ ಹಿಡಿದಿರುವ ನಿಮ್ಮ ಗ್ಯಾರಂಟಿಗಳನ್ನು ಸರಿದಾರಿಗೆ ತನ್ನಿ. ಅವುಗಳ ವೈಫಲ್ಯವನ್ನು ಪರಾಮರ್ಶೆ ಮಾಡಿ. ಅಧಿಕಾರಿಗಳ ಕಿವಿ ಹಿಂಡಿ ಕೆಲಸ ಮಾಡಿಸಿ. ನಿಮಗೆ ಆತ್ಮಸಾಕ್ಷಿ ಎನ್ನುವುದು ಇದ್ದರೆ ಮೊದಲು ಈ ಕೆಲಸ ಮಾಡಿ. ಅನ್ನಕ್ಕಾಗಿ ಜೀವತೆತ್ತ ಯುವಕನ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಆ ತಾಯಿಯ ಆರೋಗ್ಯ ಸುಧಾರಿಸಲಿ ಎಂದು ಹೆಚ್​ಡಿಕೆ ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ:ಕೇಂದ್ರದ ಅನುದಾನ ತಾರತಮ್ಯದಿಂದ ರಾಜ್ಯಕ್ಕೆ 1,87,867 ಕೋಟಿ ರೂ. ನಷ್ಟವಾಗಿದೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details