ಘಟನೆಯ ಸಿಸಿಟಿವಿ ವಿಡಿಯೋ (Viral Video) ಚಾಮರಾಜನಗರ: ಟಿಪ್ಪರ್ ಹಾಗೂ ಬೈಕ್ ಡಿಕ್ಕಿಯಾಗಿ ದಂಪತಿ ಹಾಗೂ ಮಗು ಮೃತಪಟ್ಟ ಘಟನೆಯ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳವಾರದಂದು ಗುಂಡ್ಲುಪೇಟೆ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 766ರಲ್ಲಿ (ಕ್ಯಾಲಿಕಟ್ ರಸ್ತೆ) ಅಪಘಾತ ಸಂಭವಿಸಿತ್ತು.
ಘಟನೆಯಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬೈಕ್‍ನಲ್ಲಿ ಸಂಚರಿಸುತ್ತಿದ್ದ ಕೇರಳ ಮೂಲದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಹಿಂಬದಿಯಿಂದ ಬಂದು ಬೈಕ್‍ಗೆ ಡಿಕ್ಕಿ ಹೊಡೆದ ಬಳಿಕ, ವಾಹನದ ಸಮೇತ ಇಬ್ಬರು ಲಾರಿ ಅಡಿ ಸಿಲುಕಿದ್ದರು. ಆದರೂ ಟಿಪ್ಪರ್ ನಿಯಂತ್ರಿಸಲಾಗದ ಚಾಲಕ, ಸುಮಾರು 300 ಮೀಟರ್ನಷ್ಟು ದೂರ ಹಾಗೆಯೇ ಚಾಲನೆ ಮಾಡಿಕೊಂಡು ತೆರಳಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭೀಕರ ಅಪಘಾತ ಕಂಡು ಬೆಚ್ಚಿಬಿದ್ದ ಜನರು: ಘಟನೆ ಕಂಡು ಪಕ್ಕದ ಟೀ ಅಂಗಡಿ ಹಾಗೂ ಬೇಕರಿಗಳಲ್ಲಿ ಕೂತಿದ್ದವರು ಹೌಹಾರಿ ಕೂಗಾಡಿದ್ದಾರೆ. ಟಿಪ್ಪರ್ ನಿಲ್ಲಿಸಲು ಜನರು ಕೂಗಾಡುತ್ತ ಅದರ ಹಿಂದೆ ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತ ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಿಪ್ಪರ್ ನಿಲ್ಲಿಸುವಂತೆ ಹಿಂದೆ ಓಡುತ್ತಿರುವ ಜನರು (Viral Video) ಘಟನೆಯಲ್ಲಿ ಸುಲ್ತಾನ್ ಬತ್ತೇರಿ ತಾಲೂಕಿನ ಮಲವಾಯಿಲ್ ಗ್ರಾಮದ ಧನೇಶ್‍ಮೋಹನ್ (29), ಅಂಜು (24) ಮತ್ತು ಮಗು ವಿಚ್ಚು (2) ಮೃತಪಟ್ಟಿದ್ದರು. ದಂಪತಿ ಬೈಕ್‍ನಲ್ಲಿ ಕೇರಳ ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದರು. ಕೂತನೂರು ಗುಡ್ಡದಿಂದ ಗ್ರಾವಲ್ ತುಂಬಿಕೊಂಡು ಬರುತ್ತಿದ್ದ ಮಂಡ್ಯ ಮೂಲದ (ಕೆಎ 11-ಬಿ 8497) ನೋಂದಣಿಯ ಟಿಪ್ಪರ್ ಹಿಂಬದಿಯಿಂದ ಡಿಕ್ಕಿಯಾಗಿ ಘಟನೆ ಸಂಭವಿಸಿತ್ತು.
ಭಾರ ಹೊತ್ತ ವಾಹನ ಸಾಗುವಾಗ ಚಾಲಕ ಅಜಾರೂಕತೆಯಿಂದ ಚಾಲನೆ ಮಾಡಿದ್ದಾನೆ. ಬೈಕ್‍ಗೆ ಡಿಕ್ಕಿಯಾದ ನಂತರವೂ ಟಿಪ್ಪರ್ ಅನ್ನು ನಿಯಂತ್ರಿಸದ ಕಾರಣ 300 ಮೀಟರ್ ದೂರದವರೆಗೆ ಮೃತದೇಹಗಳನ್ನು ಎಳೆದೊಯ್ದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗುಂಡ್ಲುಪೇಟೆ ಠಾಣೆ ಪೊಲೀಸರು, ಎರಡೂ ವಾಹನಗಳನ್ನು ವಶಕ್ಕೆ ಪಡೆದು ಟಿಪ್ಪರ್ ಚಾಲಕನನ್ನು ಬಂಧಿಸಿದ್ದಾರೆ. ಈ ಬಗ್ಗೆ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ:ಗುಂಡ್ಲುಪೇಟೆಯಲ್ಲಿ ಭೀಕರ ಅಪಘಾತ: ಕೇರಳ ಮೂಲದ ಮೂವರ ದುರ್ಮರಣ - Bike Lorry Accident