ಕರ್ನಾಟಕ

karnataka

ETV Bharat / state

ಬೆಂಗಳೂರು - ವಯನಾಡು ರಸ್ತೆ ಸಂಪರ್ಕ ಬಂದ್: ಚಾಮರಾಜನಗರ, ಮೈಸೂರು ಹೆಲ್ಪ್​ಲೈನ್ ಆರಂಭ - Gundlupet Kerala road closed

ಚಾಮರಾಜನಗರ ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಪ್ರವಾಸ, ಜೀವನೋಪಾಯ ಹಾಗೂ ಇನ್ನಿತರ ಕಾರಣಕ್ಕೆ ತೆರಳಿರುವವರ ಮಾಹಿತಿಯನ್ನು ಅವರ ಕುಟುಂಬಸ್ಥರು ತಿಳಿಸಿದಲ್ಲಿ ಸುರಕ್ಷಿತವಾಗಿ ಕರೆತರಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.

GUNDLUPET-KERALA ROAD CONNECTION CLOSED: DISTRICT ADMINISTRATION LAUNCHES HELPLINE
ಗುಂಡ್ಲುಪೇಟೆ-ಕೇರಳ ರಸ್ತೆ ಸಂಪರ್ಕ ಬಂದ್: ಜಿಲ್ಲಾಡಳಿತದಿಂದ ಹೆಲ್ಪ್​ಲೈನ್ ಆರಂಭ (ETV Bharat)

By ETV Bharat Karnataka Team

Published : Jul 30, 2024, 8:15 PM IST

ಬೆಂಗಳೂರು/ಚಾಮರಾಜನಗರ: ಕೇರಳದ ವಯನಾಡ್​ ಭಾಗದಲ್ಲಿಅತಿಯಾದ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಗುಂಡ್ಲುಪೇಟೆ ಮಾರ್ಗವಾಗಿ ಸಾಗುವ ಬೆಂಗಳೂರು - ವಯನಾಡ್ ರಾಷ್ಟ್ರೀಯ ಹೆದ್ದಾರಿ 766ರ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯವಾಗಿ ಗುಂಡ್ಲುಪೇಟೆ-ಬಂಡೀಪುರ - ಗುಡಲೂರ ಮಾರ್ಗದಲ್ಲಿ ತೆರಳಲು ಸೂಚಿಸಲಾಗಿದೆ.

ಜಿಲ್ಲಾಧಿಕಾರಿ ಶಿಲ್ಪಾ ನಾಗ್​ (ETV Bharat)

ಗುಂಡ್ಲುಪೇಟೆ-ಕೇರಳ ರಸ್ತೆ ಸಂಪರ್ಕ ಮಂಗಳವಾರ ಸಂಜೆ 5 ರಿಂದ ಕಡಿತಗೊಂಡಿದೆ. ಕೇರಳದ ಮುತ್ತುಂಗ ಚೆಕ್​ಫೋಸ್ಟ್​ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿವೆ. ಇದರಿಂದಾಗಿ ಗುಂಡ್ಲುಪೇಟೆಯಿಂದ ವಯನಾಡ್​, ಬತ್ತೇರಿಗೆ ತೆರಳುವ ರಸ್ತೆಮಾರ್ಗ ಬಂದ್ ಮಾಡಲಾಗಿದೆ.

ಕೇರಳದ ಮುತ್ತಂಗ ಚೆಕ್​ಪೋಸ್ಟ್​ನಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ತಮಿಳುನಾಡಿನ ಮೂಲಕ ಕೇರಳಕ್ಕೆ ತೆರಳಲು ಬದಲಿ ಮಾರ್ಗವನ್ನು ಉಪಯೋಗಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.

ಸಹಾಯವಾಣಿ ಆರಂಭ:ಕೇರಳದ ಗಡಿ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯಿಂದ ಸಾಕಷ್ಟು ಜನರು ಕೂಲಿ ಅರಸಿ ವಯನಾಡ್​, ಬತ್ತೇರಿ ಭಾಗಕ್ಕೆ ತೆರಳಿದ್ದಾರೆ. ಈ ಹಿನ್ನೆಲೆ, ಚಾಮರಾಜನಗರ ಜಿಲ್ಲಾಡಳಿತವು 24/7 ಸಹಾಯವಾಣಿ ಆರಂಭಿಸಿದೆ.

ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೇರಳ ರಾಜ್ಯದ ವಯನಾಡ್​ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಪ್ರವಾಸ, ಜೀವನೋಪಾಯ ಹಾಗೂ ಇನ್ನಿತರ ಕಾರಣಕ್ಕೆ ತೆರಳಿರುವವರ ಮಾಹಿತಿಯನ್ನು ಅವರ ಕುಟುಂಬಸ್ಥರು ತಿಳಿಸಿದಲ್ಲಿ ಸುರಕ್ಷಿತವಾಗಿ ಕರೆತರಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ ತೆರೆದಿರುವ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 08226-223163, 08226-223161, 08226-223160 ಹಾಗೂ ಮೊಬೈಲ್ ಸಂಖ್ಯೆ 9740942901ಗೆ ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ:ವಯನಾಡ್​ನಲ್ಲಿ ರಣಮಳೆಗೆ ಸರಣಿ ಭೂಕುಸಿತ: ಮಕ್ಕಳು ಸೇರಿ 107ಕ್ಕೇರಿದ ಸಾವಿನ ಸಂಖ್ಯೆ, 400ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ - Wayanad Landslides

ತ್ಯಾಜ್ಯ ವಿಲೇವಾರಿಗೆ ಲೋಕೋಪಯೋಗಿ ಇಲಾಖೆ ನೆರವು:ವಯನಾಡಿನಲ್ಲಿ ಭೂಕುಸಿತದಿಂದ ಉಂಟಾಗಿರುವ ತ್ಯಾಜ್ಯಗಳ ತೆರವಿಗೆ ರಾಜ್ಯದಿಂದ ಅಗತ್ಯ ಜೆಸಿಬಿ, ಕ್ರೇನ್ ಮತ್ತಿತರ ಭಾರೀ ವಾಹನಗಳ ಸೌಕರ್ಯಗಳನ್ನು ಲೋಕೋಪಯೋಗಿ ಇಲಾಖೆ ಕೈಗೊಳ್ಳುತ್ತಿದೆ.

ಮೈಸೂರಲ್ಲೂ ಸಕಲ ಸಿದ್ಧತೆ: ಮೈಸೂರು ಜಿಲ್ಲಾಡಳಿತವು ಕೂಡ ಹೆಗ್ಗಡದೇವನಕೋಟೆ ತಾಲೂಕು ಆಸ್ಪತ್ರೆ ಹಾಗೂ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ವೈದ್ಯರನ್ನು ನಿಯೋಜಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲು ಸಾಕಷ್ಟು ಬಸ್, ವಾಹನಗಳನ್ನು ಅಣಿಗೊಳಿಸಲಾಗಿದೆ. ಪಾರ್ಥಿವ ಶರೀರಗಳ ಸಂರಕ್ಷಣೆಗೆ ಶೈತ್ಯಾಗಾರದ ಘಟಕಗಳನ್ನು ಒದಗಿಸುವ ಸರಬರಾಜುದಾರನ್ನು ಗುರುತಿಸಲಾಗಿದೆ. ಮೈಸೂರು ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆ:0821- 24223800.

ABOUT THE AUTHOR

...view details