ವ್ಯಕ್ತಿ ಮನೆ ಮೇಲೆ ದಾಳಿ, ವಸ್ತುಗಳು ಧ್ವಂಸ ಚಿಕ್ಕೋಡಿ:ವಿವಾಹಿತ ಮಹಿಳೆ ಜೊತೆ ವ್ಯಕ್ತಿಯೊಬ್ಬ ಓಡಿಹೋದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಆಕೆಯ ಗಂಡನ ಮನೆಯವರು ದಾಳಿ ನಡೆಸಿದ್ದಾರೆ. ವ್ಯಕ್ತಿಯ ಮನೆಯಲ್ಲಿರುವ ಪೀಠೋಪಕರಣ, ಇತರ ವಸ್ತುಗಳನ್ನು ಧ್ವಂಸ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಜಿನ್ರಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಜಿನ್ರಾಳದ ವಿವಾಹಿತ ವ್ಯಕ್ತಿಯೋರ್ವ ಅದೇ ಗ್ರಾಮದ ಎರಡು ಮಕ್ಕಳ ತಾಯಿಯಾದ ಮಹಿಳೆ ಜೊತೆಗೆ ಸೋಮವಾರ ಓಡಿ ಹೋಗಿದ್ದಾನೆ. ಈ ವಿಚಾರ ಮಹಿಳೆಯ ಗಂಡನ ಮನೆಯವರಿಗೆ ಗೊತ್ತಾಗುತ್ತಿದ್ದಂತೆ, ಆ ವ್ಯಕ್ತಿಯ ತಾಯಿ ವಾಸವಿದ್ದ ಮನೆ ಮೇಲೆ ದಾಳಿ ಮಾಡಿದ್ದಾರೆ. ಮನೆಯಲ್ಲಿ ಇರುವ ವಸ್ತುಗಳನ್ನು ಧ್ವಂಸ ಮಾಡಿದ್ದಲ್ಲದೆ, ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆ ವ್ಯಕ್ತಿಯ ತಾಯಿ ಆರೋಪ ಮಾಡಿದ್ದಾರೆ.
ಈ ಬಗ್ಗೆ ಓಡಿಹೋಗಿರುವ ವ್ಯಕ್ತಿಯ ತಾಯಿ, ''ನನ್ನ ಮಗನ ವಿಚಾರಕ್ಕೆ ಮಂಗಳವಾರ ಊರಿನ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಲಾಗಿತ್ತು. ನನ್ನ ಮಗ ಮಾಡಿದ ತಪ್ಪಿಗೆ ಅವನಿಗೆ ನೀವು ಏನಾದರೂ ಶಿಕ್ಷೆ ನೀಡುವಂತೆ ಹಿರಿಯರಲ್ಲಿ ನಾನು ತಿಳಿಸಿದ್ದೆ. ಆದರೆ ರಾತ್ರಿ 8 ಗಂಟೆ ಆಸುಪಾಸಿನಲ್ಲಿ ಜನರ ಒಂದು ಗುಂಪು ಕೈಯಲ್ಲಿ ಕುಡಗೋಲು, ಕೊಡ್ಲಿ, ಕಟ್ಟಿಗೆ ಹಿಡಿದುಕೊಂಡು ಬರುವುದನ್ನು ನೋಡಿ ನಾವು ಸುರಕ್ಷಿತ ಸ್ಥಳದಲ್ಲಿ ರಕ್ಷಣೆ ಪಡೆದುಕೊಂಡೆವು. ಮನೆಯಲ್ಲಿ ನಾನು ಮತ್ತು ನಮ್ಮ ಅತ್ತೆ ಹಾಗೂ ಇನ್ನೊಬ್ಬ ಮಗ ಸ್ವಲ್ಪದರಲ್ಲೇ ಬಚಾವ್ ಆದೆವು. ಮನೆಯ ಮೇಲೆ ದಾಳಿ ನಡೆಯುತ್ತಿದ್ದಂತೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಆದರೆ, ಅವರು ಸಮಯಕ್ಕೆ ಸರಿಯಾಗಿ ಬರಲಿಲ್ಲ, ಇದರಿಂದ ನಮ್ಮ ಮನೆಯಲ್ಲಿನ ವಸ್ತುಗಳು ಯಾವುದೂ ಉಳಿದಿಲ್ಲ. ಜೊತೆಗೆ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದು ಹಣವನ್ನು ದೋಚಿಕೊಂಡು ಹೋಗಿದ್ದಾರೆ. ಈ ಕುರಿತು ನಾವು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ'' ಎಂದು ಹೇಳಿದರು.
ಸದ್ಯ ಘಟನೆ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ಸಂಬಳದ ಹಣ ಕೇಳಿದ್ದಕ್ಕೆ ಮರಕ್ಕೆ ಕಟ್ಟಿ ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ ಆರೋಪ