ಕರ್ನಾಟಕ

karnataka

ETV Bharat / state

ಮಹಿಳಾ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಗೃಹಲಕ್ಷ್ಮಿ ಪಾಲೇ ಹೆಚ್ಚು; ಹೇಗಿದೆ ಇತರೆ ಯೋಜನೆಗಳ ಸ್ಟೇಟಸ್ಸು? - GRIHALAKSHMI SCHEME

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನೀಡುತ್ತಿರುವ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಅತಿ ಹೆಚ್ಚು ಆರ್ಥಿಕ ಹೊರೆ ಹೊಂದಿರುವ ಗ್ಯಾರಂಟಿ ಯೋಜನೆಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಿಡುಗಡೆ ಮಾಡಿರುವ ಅನುದಾನದಲ್ಲಿ ಶೇ. 90ರಷ್ಟು ಅನುದಾನ ಗೃಹಲಕ್ಷ್ಮಿ ಯೋಜನೆಗಾಗಿದೆ.

Vidhan Soudha
ವಿಧಾನ ಸೌಧ (ETV Bharat)

By ETV Bharat Karnataka Team

Published : Sep 5, 2024, 4:21 PM IST

ಬೆಂಗಳೂರು: ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 2024-25 ಸಾಲಿನ ಬಜೆಟ್​ನಲ್ಲಿ 34,406 ಕೋಟಿ ರೂ.‌ ಅನುದಾನ ಹಂಚಿಕೆ ಮಾಡಿದ್ದು, ಈ ಪೈಕಿ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಇಲಾಖೆಗೆ ನೀಡಿದ ಒಟ್ಟು ಅನುದಾನದಲ್ಲಿ ಗೃಹಲಕ್ಷ್ಮಿ ಪಾಲೇ ಹೆಚ್ಚಾಗಿದೆ. ಅಂದರೆ ಒಟ್ಟು ಅನುದಾನದ ಶೇ.83 ರಷ್ಟನ್ನು ಗೃಹಲಕ್ಷ್ಮಿ ಯೋಜನೆಗೆ ಮೀಸಲಿಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನ್ನ ಬಹುತೇಕ ಆದ್ಯತೆಯನ್ನು ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಕೇಂದ್ರೀಕರಿಸಿದೆ. ಯಜಮಾನಿಯರಿಗೆ ಮಾಸಿಕ 2,000 ರೂ. ನೀಡುವ ಅತಿ ದೊಡ್ಡ ಯೋಜನೆ ಇದಾಗಿದ್ದು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನೀಡುತ್ತಿರುವ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಅತಿ ಹೆಚ್ಚು ಆರ್ಥಿಕ ಹೊರೆ ಹೊಂದಿರುವ ಗ್ಯಾರಂಟಿ ಯೋಜನೆಯಾಗಿದೆ.

ಇಲಾಖೆಯಲ್ಲಿ ಗೃಹಲಕ್ಷ್ಮಿಯದ್ದೇ ಪಾರುಪತ್ಯ: ಕೆಡಿಪಿ ಪ್ರಗತಿ ಪರಿಶೀಲನಾ ಅಂಕಿಅಂಶದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಇತರ ಯೋಜನೆಗಳಿಗೆ 5,798 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಇಲಾಖೆಯಲ್ಲಿ ಜುಲೈವರೆಗೆ ವಿವಿಧ ಯೋಜನೆಗಳಿಗೆ ಒಟ್ಟು 7,486 ಕೋಟಿ ರೂ.‌ ಅನುದಾನ ಬಿಡುಗಡೆ ಮಾಡಲಾಗಿದ್ದು, ಈವರೆಗೆ ಒಟ್ಟು 6,748 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅಂದರೆ ಒಟ್ಟು ಹಂಚಿಕೆಯ ಪ್ರತಿಯಾಗಿ 19.61% ಆರ್ಥಿಕ ಪ್ರಗತಿ ಕಂಡಿದೆ.

ಇಲಾಖೆಗೆ ಬಿಡುಗಡೆಯಾದ ಒಟ್ಟು ಅನುದಾನದ ಪೈಕಿ ಗೃಹಲಕ್ಷ್ಮಿಗೆ ಜುಲೈವರೆಗೆ 6,755 ಕೋಟಿ ರೂ. ಬಿಡುಗಡೆ ಮಾಡಿದ್ದರೆ, 6,133 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅಂದರೆ ಗೃಹಲಕ್ಷ್ಮಿ ಯೋಜನೆ ಒಟ್ಟು ಹಂಚಿಕೆ ಪ್ರತಿಯಾಗಿ ಶೇ.43 ಆರ್ಥಿಕ ಪ್ರಗತಿ ಕಂಡಿದೆ. ಇಲಾಖೆಗೆ ಒಟ್ಟು ಬಿಡುಗಡೆ ಮಾಡಲಾದ ಅನುದಾನದ ಪೈಕಿ 90% ಅನುದಾನ ಬಿಡುಗಡೆ ಮಾಡಿರುವುದು ಗೃಹ ಲಕ್ಷ್ಮಿ ಯೋಜನೆಗೆ.‌ ಉಳಿದಂತೆ ಇಲಾಖೆಯ ಇತರ ಯೋಜನೆಗಳಿಗೆ ಕೇವಲ 10%ದಷ್ಟು ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ.

ಇತರೆ ಪ್ರಮುಖ ಯೋಜನೆಗಳಿಗೆ ಶೂನ್ಯ ಬಿಡುಗಡೆ:ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಬರುವ ಪ್ರಮುಖ ಯೋಜನೆಗಳಿಗೆ ಅನುದಾನ ಬಿಡುಗಡೆ ತೃಪ್ತಿದಾಯಕವಾಗಿಲ್ಲ. ಕೆಡಿಪಿ ಪ್ರಗತಿ ಅಂಕಿಅಂಶದಂತೆ ಇಲಾಖೆಯ ಮಹತ್ವದ ಭಾಗ್ಯಲಕ್ಷ್ಮಿ ಯೋಜನೆಗೆ 2024-25 ಸಾಲಿನಲ್ಲಿ ಒಟ್ಟು 224 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ, ಜುಲೈವರೆಗೆ ಭಾಗ್ಯಲಕ್ಷ್ಮಿ ಯೋಜನೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಇತ್ತ ಅಂಗನವಾಡಿ ನಿರ್ವಹಣೆಗೆ 40 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದರೆ ಈವರೆಗೂ ಒಂದು ರೂ. ಕೂಡ ಬಿಡುಗಡೆ ಮಾಡಿಲ್ಲ.

2024-25 ಸಾಲಿನಲ್ಲಿ ಮಹಿಳೆಯರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಸರ್ಕಾರ 26 ಕೋಟಿ ರೂ. ಹಂಚಿಕೆ ಮಾಡಿದೆ. ಆದರೆ ಜುಲೈವರೆಗಿನ ಕೆಡಿಪಿ ಪ್ರಗತಿಯಂತೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಪಿಂಚಣಿ ವ್ಯವಸ್ಥೆಗೆ 12 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಇನ್ನು ಪೌಷ್ಟಿಕಾಂಶ ಯೋಜನೆಗಳಾದ ಕ್ಷೀರಭಾಗ್ಯ, ಸೃಷ್ಟಿ, ಮಾತೃಪೂರ್ಣ ಯೋಜನೆಗಳಿಗೆ ಈ ಸಾಲಿನಲ್ಲಿ 740 ಕೋಟಿ ರೂ. ಬಜೆಟ್ ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಜುಲೈವರೆಗೆ 148 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, 95 ಕೋಟಿ ರೂ.‌ ವೆಚ್ಚ ಮಾಡಲಾಗಿದೆ. ಅಂದರೆ ನಾಲ್ಕು ತಿಂಗಳಲ್ಲಿ 17% ಪ್ರಗತಿ ಕಾಣಲು ಸಾಧ್ಯವಾಗಿದೆ.

ಕೇಂದ್ರ ಹಾಗೂ ರಾಜ್ಯ ಪಾಲುದಾರಿಕೆಯ ಪೋಷಣ ಅಭಿಯಾನಕ್ಕೆ 91 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ, ಜುಲೈವರೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಇನ್ನು ಕೆಎಸ್​ಎಫ್​ಸಿಯಿಂದ ಮಹಿಳೆಯರಿಗೆ ನೀಡುವ ಪ್ರೋತ್ಸಾಹಧನಕ್ಕಾಗಿ 55 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದರೆ ಜುಲೈವರೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರದ ಸಹಾಯಾನುದಾನದ ವಾತ್ಸಲ್ಯ ಅಭಿಯಾನಕ್ಕಾಗಿ ರಾಜ್ಯದ ಪಾಲು 40 ಕೋಟಿ ರೂ. ಹಂಚಲಾಗಿದೆ. ಆದರೆ ಈವರೆಗೆ ಅನುದಾನ ಬಿಡುಗಡೆ ಮಾಡಿಲ್ಲ.

ಕೆಡಿಪಿ ಪ್ರಗತಿ ಅಂಕಿಅಂಶದಂತೆ ಇತ್ತ ಉದ್ಯೋಗಿನಿ ಕಾರ್ಯಕ್ರಮಕ್ಕೆ ಒಟ್ಟು 15 ಕೋಟಿ ರೂ. ಹಂಚಲಾಗಿದೆ. ಆದರೆ ಆ ಪೈಕಿ ಜುಲೈವರೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಹೆಚ್​ಐವಿ ಸೋಂಕಿತ ಮಕ್ಕಳಿಗಾಗಿನ ವಿಶೇಷ ನೆರವಿಗಾಗಿ 15 ಕೋಟಿ ರೂ‌. ಹಂಚಿಕೆ ಮಾಡಲಾಗಿದೆ. ಆದರೆ ಈವರೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣದ ವಿವಿಧ ಯೋಜನೆಗಳಿಗೆ ಪ್ರಸಕ್ತ ಸಾಲಿನಲ್ಲಿ ಒಟ್ಟು 237 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಜುಲೈವರೆಗೆ 52 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಪೈಕಿ ಒಟ್ಟು 43 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಕೇವಲ 18% ಆರ್ಥಿಕ ಪ್ರಗತಿ ಕಂಡಿದೆ. ಇಲಾಖೆಯಲ್ಲಿ ಬಹುತೇಕ ಯೋಜನೆಗಳು ಕೇಂದ್ರ-ರಾಜ್ಯ ಪಾಲುದಾರಿಕೆಯಡಿ ಅನುಷ್ಠಾನವಾಗುತ್ತಿದ್ದು, ಸುಮಾರು 10ಕ್ಕೂ ಅಧಿಕ ಯೋಜನೆಗಳಿಗೆ ಈವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ.

ಇದನ್ನೂ ಓದಿ:'ಗೃಹಲಕ್ಷ್ಮಿ' ತಂದ ಸೌಭಾಗ್ಯ; ಸೊಸೆಗೆ ಫ್ಯಾನ್ಸಿ ಸ್ಟೋರ್​ ಹಾಕಿಕೊಟ್ಟ ಅತ್ತೆ - A FANCY STORE

ABOUT THE AUTHOR

...view details