ಬೆಂಗಳೂರು: ಜನ, ಜಾನುವಾರುಗಳ ಸುರಕ್ಷತೆ ದೃಷ್ಟಿಯಿಂದ ಕೃಷಿ ಹೊಂಡದ ಸುತ್ತ ತಂತಿಬೇಲಿ ನಿರ್ಮಾಣಕ್ಕೂ ಕೃಷಿ ಭಾಗ್ಯ ಯೋಜನೆಯಡಿ ಅನುದಾನ ನೀಡುವ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನಪರಿಷತ್ನಲ್ಲಿ ಸದಸ್ಯ ಕೇಶವ ಪ್ರಸಾದ್.ಎಸ್ ಅವರ ಚುಕ್ಕಿ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವು ನೋವು ಉಂಟಾದ ಘಟನೆಗಳ ಬಗ್ಗೆ ವರದಿಯಾಗಿವೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸುತ್ತಲೂ ಬೇಲಿ ನಿರ್ಮಾಣಕ್ಕೆ ಕೃಷಿ ಭಾಗ್ಯ ಯೋಜನೆಯಡಿ ಅನುದಾನ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
33,686 ಕೃಷಿ ಹೊಂಡ ನಿರ್ಮಾಣ:ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ವಿವಿಧ ಯೋಜನೆಗಳಡಿಗಳಲ್ಲಿ 33,686 ಕೃಷಿ ಹೊಂಡಗಳನ್ನ ನಿರ್ಮಿಸುವ ಮೂಲಕ ರೈತರಿಗೆ ನೆರವು ಒದಗಿಸಲಾಗಿದೆ. ಈ ಕೃಷಿಭಾಗ್ಯ ಯೋಜನೆ 2021-22 ಹಾಗೂ 2022- 23ನೇ ಸಾಲಿನಲ್ಲಿ ಚಾಲ್ತಿಯಲ್ಲಿ ಇರಲಿಲ್ಲ. 2023-24ನೇ ಸಾಲಿನಲ್ಲಿ 6,601 ಕೃಷಿ ಹೊಂಡಗಳನ್ನು 2332.75 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು. ಇದೇ ರೀತಿ ಜಲಾನಯನ ಅಭಿವೃದ್ಧಿ ಇಲಾಖೆಯಿಂದ 2022-23ನೇ ಸಾಲಿನಲ್ಲಿ 285, 2023-24ನೇ ಸಾಲಿನಲ್ಲಿ 3,483 ಸೇರಿದಂತೆ 1297.87 ಲಕ್ಷ ರೂಪಾಯಿ ವೆಚ್ಚದಲ್ಲಿ 3,768 ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ 2021-22 ಸಾಲಿನಲ್ಲಿ 10,712 ಹಾಗೂ 2022-23ರಲ್ಲಿ 7,103 ಮತ್ತು 2023-24ನೇ ಸಾಲಿನಲ್ಲಿ 5,787 ಕೃಷಿ ಹೊಂಡ ಸೇರಿದಂತೆ 18874.96 ಲಕ್ಷ ವೆಚ್ಚದಲ್ಲಿ 23,317 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ಮೂರು ವರ್ಷಗಳ ಅವಧಿಯಲ್ಲಿ 22505.53 ಲಕ್ಷ ರೂಪಾಯಿ ವೆಚ್ಚದಲ್ಲಿ ಒಟ್ಟು 33,686 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.