ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹ ವಿಭಜನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಕೆಲವೇ ದಿನಗಳಲ್ಲಿ ಜೈಲು ಮೂರು ಭಾಗವಾಗಿ ಹೋಳಾಗಲಿದೆ. ಈ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತರುವ ಜೊತೆಗೆ ಅಕ್ರಮ ಚಟುವಟಿಕೆಗೆ ಶಾಶ್ವತ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಡಳಿತಾತ್ಮಕವಾಗಿ ಜೈಲನ್ನು ಮೂರು ಭಾಗವಾಗಿ ವಿಭಜಿಸಬೇಕೆಂದು ಕಾರಾಗೃಹ ಹಾಗೂ ಸುಧಾರಣೆ ಸೇವೆ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ಸರ್ಕಾರ ಅಸ್ತು ಎಂದಿದ್ದು, ಶೀಘ್ರದಲ್ಲಿ ಜೈಲು ಮೂರು ಭಾಗಗಳಾಗಿ ವಿಭಜನೆಯಾಗಲಿದೆ.
ಬಿಡುಗಡೆಗಿಂತ ಜೈಲು ಸೇರುವವರೇ ಅಧಿಕ: ರಾಜ್ಯದಲ್ಲಿ 9 ಕೇಂದ್ರ ಕಾರಾಗೃಹ, 21 ಜಿಲ್ಲಾ, 23 ತಾಲೂಕು ಹಾಗೂ ಒಂದು ಬಯಲು ಬಂಧೀಖಾನೆ ಸೇರಿದಂತೆ ಒಟ್ಟು 54 ಕಾರಾಗೃಹಗಳಿವೆ. ಸಜಾಬಂಧಿ ಹಾಗೂ ವಿಚಾರಣಾಧೀನ ಬಂಧಿ ಸೇರಿ ಒಟ್ಟು 14,645 ಕೈದಿಗಳಿದ್ದಾರೆ. ಈ ಪೈಕಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ 4,994 ಕೈದಿಗಳಿದ್ದಾರೆ. ದಿನೇ ದಿನೆ ಬಿಡುಗಡೆ ಆಗುವವರಿಗಿಂತ ಜೈಲಿಗೆ ಪ್ರವೇಶಿಸುವ ಆರೋಪಿಗಳ ಸಂಖ್ಯೆಯೇ ಅಧಿಕವಾಗುತ್ತಿದೆ.
ನಿಗದಿಗಿಂತ ಜೈಲಿನಲ್ಲಿ 1 ಸಾವಿರ ಮಂದಿ ಹೆಚ್ಚಾಗಿದ್ದು, ಬಂಧಿಗಳ ಅಕ್ರಮ ಚಟುವಟಿಕೆ ಮೇಲೆ ಕಣ್ಣಿಡುವುದು ಅಧಿಕಾರಿ ಹಾಗೂ ಸಿಬ್ಬಂದಿಗೆ ಕಷ್ಟವಾಗುತ್ತಿದೆ. ಹೀಗಾಗಿ, ಸರ್ಕಾರ ಆದೇಶದಂತೆ ಸಜಾಬಂಧಿ, ವಿಚಾರಣಾಧೀನ ಹಾಗೂ ಮಹಿಳಾ ಕೈದಿ ಎಂಬಂತೆ ಮೂರು ವಿಭಾಗಗಳಾಗಿ ವಿಂಗಡಣೆ ಮಾಡಲಾಗುತ್ತಿದೆ.
ಬಂಧಿಗಳ ನಡುವೆ ತಡೆಗೋಡೆ ನಿರ್ಮಾಣ: ಸುಮಾರು 40 ಎಕರೆ ಪ್ರದೇಶವನ್ನು ಒಳಗೊಂಡಿರುವ ಸೆಂಟ್ರಲ್ ಜೈಲಿನಲ್ಲಿ 1,068 ಸಜಾಬಂಧಿ, 3,926 ವಿಚಾರಣಾಧೀನ ಹಾಗೂ 205 ಮಹಿಳಾ ಬಂಧಿ ಸೇರಿ ಒಟ್ಟು 4,994 ಮಂದಿ ಕೈದಿಗಳಿದ್ದಾರೆ. ಭಯೋತ್ಪಾದನೆ ಸೇರಿದಂತೆ ಘೋರ ಅಪರಾಧ ಕೃತ್ಯ ಎಸಗಿರುವವರಿಗಾಗಿ ಪ್ರತ್ಯೇಕ ಹೈ ಸೆಕ್ಯೂರಿಟಿ ಕಾರಾಗೃಹವನ್ನು ಸೆಂಟ್ರಲ್ ಜೈಲಿನ ಪಕ್ಕದಲ್ಲಿ ನಿರ್ಮಿಸಲಾಗುತ್ತಿದೆ.
ಮತ್ತೊಂದೆಡೆ, ಪ್ರಸ್ತಾಪಿಸಲಾಗಿರುವ ಶಿಕ್ಷಾಬಂಧಿ, ವಿಚಾರಣಾಧೀನ ಹಾಗೂ ಮಹಿಳಾ ಬಂಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿದೆ. ಇದಕ್ಕಾಗಿ ಕೈದಿಗಳ ನಡುವೆ ತಡೆಗೋಡೆ ನಿರ್ಮಾಣಕ್ಕಾಗಿ ಸರ್ಕಾರ 70 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದು, ವಿಭಜನೆ ಕಾರ್ಯ ಚುರುಕುಗೊಳಿಸಿರುವುದಾಗಿ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು - ಸಿಬ್ಬಂದಿಗಳು ಸಹ ಪ್ರತ್ಯೇಕ: ಮೂರು ಹೋಳಾಗಿ ವಿಭಜನೆ ಆಗುವುದರಿಂದ ಅಧಿಕಾರಿ ಹಾಗೂ ಸಿಬ್ಬಂದಿಯೂ ಸಹ ಪ್ರತ್ಯೇಕವಾಗಲಿದ್ದಾರೆ. ಇದು ಜೈಲಿನ ಭದ್ರತೆ ಜೊತೆಗೆ ಪಾರದರ್ಶಕತೆಗೆ ಮುನ್ನುಡಿಯಾಗಲಿದೆ. ಹಣ ನೀಡಿದರೆ ಬೇಕಾದ ವಸ್ತುಗಳು ಹಾಗೂ ಐಷಾರಾಮಿ ಸೌಲಭ್ಯಗಳು ಸಿಗಲಿವೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಫೋಟೋವೊಂದು ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಸದ್ಯ ಶಿಕ್ಷಾಬಂಧಿ, ವಿಚಾರಣಾಧೀನ ಕೈದಿಗಳನ್ನು ಪ್ರತ್ಯೇಕ ಬ್ಯಾರಕ್ನಲ್ಲಿ ಇರಿಸಲಾಗಿದ್ದರೂ ಊಟ, ಅಡುಗೆ ಮನೆ ಹಾಗೂ ಆಸ್ಪತ್ರೆ ಕಾರಣಕ್ಕಾಗಿ ಹೊರಗೆ ಬರಲೇಬೇಕಿದೆ. ಈ ವೇಳೆ ಸಜಾಬಂಧಿಗಳು ಹಾಗೂ ವಿಚಾರಣಾ ಕೈದಿಗಳು ಪರಸ್ಪರ ಎದುರಾಗಲಿದ್ದಾರೆ. ಇದರಿಂದ ಅಪರಾಧ ಸಂಚು ರೂಪಿಸುವ ಸಾಧ್ಯತೆಯಿದೆ. ಹೀಗಾಗಿ, ಪ್ರತ್ಯೇಕ ಮೂರು ವಿಭಾಗವಾದರೆ ವಿಚಾರಣಾಧೀನ ಕೈದಿಗಳ ವಿಭಾಗಕ್ಕೆ ಮುಖ್ಯ ಅಧೀಕ್ಷಕ, ಕೈದಿ ಹಾಗೂ ಮಹಿಳಾ ಕೈದಿ ವಿಭಾಗಗಳಿಗೆ ಎಸ್ಪಿ ದರ್ಜೆ ಅಧೀಕ್ಷರು ಮುಖ್ಯಸ್ಥರಾಗಲಿದ್ದಾರೆ. ಈ ಮೂರು ವಿಭಾಗಗಳ ಉಸ್ತುವಾರಿಯನ್ನು ಡಿಐಜಿ ವಹಿಸಲಿದ್ಧಾರೆ ಎಂದು ಮೂಲಗಳು ತಿಳಿಸಿವೆ.
ಕೇವಲ 400 ಮಂದಿ ಸಿಬ್ಬಂದಿ: ಜೈಲಿನಲ್ಲಿ ಬಹುತೇಕ 5 ಸಾವಿರ ಕೈದಿಗಳಿದ್ದಾರೆ. ಇವರ ಮೇಲೆ ಹದ್ದಿನ ಕಣ್ಣಿಡಬೇಕಾಗಿರುವ ಅಧಿಕಾರಿ ಹಾಗೂ ಸಿಬ್ಬಂದಿಯ ಸಂಖ್ಯೆಯಲ್ಲಿ ಗೌಣವಾಗಿದ್ದು, ಇದು ಅಕ್ರಮಕ್ಕೆ ದಾರಿಯಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸರ್ಕಾರದಿಂದ ಸುಮಾರು 800 ಹುದ್ದೆಗಳು ಮಂಜೂರಾಗಿದ್ದ ಪೈಕಿ 400 ಮಂದಿ ಮಾತ್ರ ಸಿಬ್ಬಂದಿಗಳಿದ್ದಾರೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.
ಸಾವಿರಾರು ಕೈದಿಗಳಿರುವ ಕಾರಾಗೃಹದಲ್ಲಿ ನೂರಾರು ಸಂಖ್ಯೆಯಲ್ಲಿ ಸಿಬ್ಬಂದಿಯಿದ್ದು, ಇದು ಅವರ ಕಾರ್ಯದೊತ್ತಡ ಹೆಚ್ಚಾಗಲು ಕಾರಣವಾಗಿದೆ. ಖಾಲಿಯಿರುವ ಹುದ್ದೆಗಳನ್ನು ತುಂಬುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ, ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ಧಾರೆ.
- ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಸುವ ಸಾಮರ್ಥ್ಯ - 4,146
- ಒಟ್ಟು ಇರುವ ಕೈದಿಗಳು - 4,994
- ವಿಚಾರಣಾಧೀನ ಕೈದಿಗಳು - 3,926
- ಶಿಕ್ಷಾಬಂಧಿಗಳು - 1,068
- ಮಹಿಳಾ ಬಂಧಿಗಳು - 205
ಜೈಲು ವಿಭಜನೆಯಿಂದಾಗುವ ಅನುಕೂಲಗಳು:
- ಭದ್ರತೆ ಹಾಗೂ ಅಕ್ರಮಕ್ಕೆ ಕಡಿವಾಣಕ್ಕೆ ನೆರವು ಜೈಲಿನ ಆಡಳಿತದಲ್ಲಿ ಪಾರದರ್ಶಕತೆಯಲ್ಲಿ ಸುಧಾರಣೆ
- ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲಿನ ಜವಾಬ್ದಾರಿ ಹೊರೆ ಕಡಿಮೆ
''ಪರಪ್ಪನ ಅಗ್ರಹಾರ ಜೈಲು ವಿಭಜನೆಗೆ ಸರ್ಕಾರ ಅನುಮತಿ ನೀಡಿದೆ. ಶಿಕ್ಷಾಬಂಧಿ, ವಿಚಾರಣಾಧೀನ ಹಾಗೂ ಮಹಿಳಾ ಕೈದಿ ಎಂಬ ವಿಭಾಗಗಳಾಗಿ ವಿಂಗಡಣೆ ಮಾಡಲಾಗುತ್ತಿದೆ. ಕೈದಿಗಳ ನಡುವೆ ಪ್ರತ್ಯೇಕ ತಡೆಗೋಡೆ ನಿರ್ಮಿಸಿ ಆಡಳಿತ ವಿಕೇಂದ್ರೀಕರಣವಾಗಲಿದೆ. ಸಿಬ್ಬಂದಿಯ ಹೊರೆ ಇಳಿಸಿ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ. ಅಲ್ಲದೆ, ಜೈಲಿನಲ್ಲಿ ನಡೆಯುವ ಅಕ್ರಮಕ್ಕೂ ಬ್ರೇಕ್ ಹಾಕಬಹುದಾಗಿದೆ'' ಎಂದು ಬಂಧೀಖಾನೆ ಇಲಾಖೆಯ ಡಿಐಜಿ ಕೆ.ಸಿ.ದಿವ್ಯಶ್ರೀ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಿಯಕರನೊಂದಿಗೆ ಹೊಸ ವರ್ಷಾಚರಣೆಗೆ ಹೋದವಳ ಹತ್ಯೆ: ಆತ್ಮಹತ್ಯೆ ಕಥೆ ಕಟ್ಟಿದ್ದ ಪ್ರಿಯಕರ ಅರೆಸ್ಟ್